ಕನ್ನಡ ವಾರ್ತೆಗಳು

ಡೊನೇಷನ್ ನಿಯಂತ್ರಿಸಿ, ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಿ; ಕುಂದಾಪುರ ತಹಶಿಲ್ದಾರ್ ಕಛೇರಿಯೆದುರು ಎಸ್‌ಎಫ್‌ಐ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚಿನ ಡೊನೇಷನ್ ವಸೂಲಿ ಮಾಡುವುದು ಎಗ್ಗಿಲ್ಲದೇ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, ನಿಯಮಗಳ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ವಸೂಲಿಯಲ್ಲಿ ತೊಡಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಆದೇಶಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ನ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಆರೋಪಿಸಿದರು.

ಖಾಸಗಿ ಕಾಲೇಜುಗಳಲ್ಲಿನ ಡೊನೆಶನ್ ಹಾವಳಿಯನ್ನು ನಿಯಂತ್ರಿಸಲು ’ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ವನ್ನು ರಚಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೇಡರೇಶನ್ ಕುಂದಾಪುರದ ಮಿನಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

SFI_Protest_Kndpr SFI_Protest_Kndpr (1)

ಡೋನೆಷನ್ ಹಾವಳಿಯನ್ನು ನಿಯಂತ್ರಿಸುವಂತೆ ಕಳೆದ ಕೆಲವು ವರ್ಷಗಳಿಂದ ಎಸ್‌ಎಫ್‌ಐ ನಿರಂತರವಾದ ಹೋರಾಟವನ್ನು ಮಾಡುತ್ತಿದೆ, ಆದರೆ ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಸೂಕ್ತವಾದ ಸ್ಪಂದನೆ ದೊರೆತಿಲ್ಲ. ಕಳೆದ ಬಾರಿ ತಹಶೀಲ್ದಾರರಿಗೆ ಮನವಿಯನ್ನು ನೀಡಲಾಗಿತ್ತು. ಅಧಿಕಾರಿಗಳಿಂದ ಯಾವುದೇ ಸ್ಪಂಧನೆ ದೊರಕಿಲ್ಲ ಎಂದವರು ಹೇಳಿದರು.

ಡಿ.ವೈ.ಎಪ್.ಐ ಪ್ರಮುಖ ಸುರೇಶ್ ಕಲ್ಲಾಗರ್ ಮಾತನಾಡಿ, ಡೊನೇಷನ್ ಹಾವಳಿಯಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ, ಶಿಕ್ಷಣವೆನ್ನುವುದು ಮಾರಾಟದ ವಸ್ತುವಾಗುತ್ತಿರುವುದು ಖಂಡನೀಯ ವಿಚಾರವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿನ ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಪ್ರಶ್ನಿಸುವುದಕ್ಕೆ ವಿದ್ಯಾರ್ಥಿ ಚುನಾವಣೆಯನ್ನು ನಡೆಸಬೇಕು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ, ತಹಶಿಲ್ದಾರ್ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ಇಲಾಖೆ ಮುಖ್ಯಸ್ಥರು, ಪಾಲಕರು ಹಾಗೂ ಎಸ್.ಎಫ್.ಐ. ಪ್ರತಿನಿಧಿಗಳ ಜಂಟಿ ಸಭೆ ಕರೆಯಬೇಕು, ಖಾಸಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿರುವ ‘ಕೇಂದ್ರೀಯ ಶಾಸನ’ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಕಾಮ್ರೇಡ್ ಎಚ್. ನರಸಿಂಹ, ಎಸ್‌ಎಫ್‌ಐ ಸಂಘಟನೆಯ ಅಧ್ಯಕ್ಷ ಅಕ್ಷಯ ವಡೇರಹೋಬಳಿ, ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಹೆಡ್ ಕ್ವಾಟರ್‌ನ ಡೆಪ್ಯೂಟಿ ತಹಶಿಲ್ದಾರ್ ಕೆ. ರಾಮಚಂದ್ರ ರಾವ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

Write A Comment