ಕನ್ನಡ ವಾರ್ತೆಗಳು

ತುಳು ಸಾಹಿತ್ಯ ವೈಚಾರಿಕತೆ ನೆಲೆ ಕಂಡಿದೆ : ವಿವೇಕ ರೈ

Pinterest LinkedIn Tumblr

Mulky_news_photo

ಮೂಲ್ಕಿಮೇ.02 : ಕರಾವಳಿಯಲ್ಲಿ ತುಳು ಸಾಹಿತ್ಯ ಪರೋಕ್ಷವಾಗಿ ಬೆಳೆಯಲು “ಪ್ರಜಾವಾಣಿ”ಯ ಮೂಲಕ ವೈಚಾರಿಕತೆಯ ನೆಲೆ ಕಂಡಿದೆ. ತುಳು ಭಾಷಾ ಕೃಷಿಯ ವಿಸ್ತರಣೆಗೆ ಪೂರಕ ವೇದಿಕೆ ನೀಡಿದ್ದರಿಂದ ಎಲ್ಲಾ ಭಾಷಿಗರು ತುಳುವನ್ನು ಅರ್ಥ ಮಾಡಿಕೊಳ್ಳುವ ಸಾಹಿತ್ಯ ಮೂಡಿದೆ. ಸಾಹಿತಿಗಳ ಬರವಣಿಗೆ ಹೆಚ್ಚಾದಲ್ಲಿ ಸಾಹಿತ್ಯದ ಉಸಿರು ಉಳಿಯುತ್ತದೆ. ತುಳು ಪರಂಪರೆಯನ್ನು ವಿಭಿನ್ನ ಕೋನದಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ಗಣೇಶ್ ಅಮಿನ್ ಸಂಕಮಾರ್ ಬರೆದಿರುವುದು ಶ್ಲಾಘನೀಯ ಎಂದು ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಅವರು ಹಳೆಯುಂಗಡಿ ಪಾವಂಜೆಯ ರಾಮಪೂಜಾರಿ ಸಿರಿ ದೊಂಪದಲ್ಲಿ  ನಡೆದ ಗೇನದ ನಡೆ ಮತ್ತು ಸಾಹಿತ್ಯ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ “ಪ್ರಜಾವಾಣಿ” ಅಂಕಣಗಾರ ಗಣೇಶ್ ಅಮಿನ್ ಸಂಕಮಾರ್‌ರವರು ಬರೆದಿರುವ “ಸಂತೆದುಲಾಯಿ ಒಂತೆ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕುಡ್ಲ ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು.”ಪ್ರಜಾವಾಣಿ” ದಿನಪತ್ರಿಕೆಯ ಮಂಗಳೂರಿನ ಬ್ಯುರೋ ಚೀಫ್ ಬಾಲಕೃಷ್ಣ ಪುತ್ತಿಗೆ ಕೃತಿಯನ್ನು ಪರಿಚಯಿಸಿ ತುಳು ಭಾಷೆಗೆ ಇಂದಿಗೂ ನ್ಯಾಯ ಸಿಗದೇ ಇರುವ ಈ ಕಾಲದಲ್ಲಿ ಸಾಹಿತ್ಯದ ಅನಾವರಣ ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಸಾಹಿತ್ಯ ರಚನೆಗಾರರಿಗೆ ಯಾವ ಗಡಿಯ ಹಂಗಿರಬಾರದು ಎಂದರು.ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್‌ರನ್ನು ವಿಶೇಷವಾಗಿ ಅಭಿನಂದಿಸಲಾಯಿತು.ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ ಮತ್ತು ತುಳು ಕೂಟ ಕುಡ್ಲ ಜಂಟಿಯಾಗಿ ಕಾರ್ಯಕ್ರಮವನ್ನು ಸಂಯೋಜಿಸಿದ್ದವು.

ವಿಧಾನ ಪರಿಷತ್‌ನ ಸದಸ್ಯ ಗಣೇಶ್ ಕಾರ್ಣಿಕ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ರವೀಂದ್ರ ಪೂಜಾರಿ, ಸಂತ ಅಲೋಶಿಯಸ್ ಪದವಿ ಕಾಲೇಜಿನ ಪ್ರೊ.ಸ್ಟೀಬರ್ಟ್ ಡಿಸಿಲ್ವ, ಪ್ರೊ. ಜಾನ್ ಡಿ ಸಿಲ್ವ, ನಿನಾದ ಟ್ರಸ್ಟ್‌ನ ಕಡಂಬೋಡಿ ಮಹಾಬಲ ಪೂಜಾರಿ, ಎಚ್.ವಸಂತ ಬೆರ್ನಾರ್ಡ್, ಜಯಂತ ಸನಿಲ್, ಚಂದ್ರಶೇಖರ ನಾನಿಲ್, ಜಯಂತಿ ಸಂಕಮಾರ್, ಸಂಘಟಕ ಗಣೇಶ್ ಅಮಿನ್ ಸಂಕಮಾರ್, ಅನು ಸಂಕಮಾರ್, ನವೀನ್ ಶೆಟ್ಟಿ ಎಡ್ಮೆಮಾರ್, ಭವ ಸಂಕಮಾರ್ ಹಾಜರಿದ್ದರು.

ನರೇಂದ್ರ ಕೆರೆಕಾಡು_

Write A Comment