ಕನ್ನಡ ವಾರ್ತೆಗಳು

ವೈದ್ಯರ ನಿರ್ಲಕ್ಷ : ಭೇದಿಯಿಂದ ನರಳುತ್ತಿದ್ದ ಮಗು ಆಸ್ಪತ್ರೆಯಲ್ಲಿ ಮೃತ್ಯು

Pinterest LinkedIn Tumblr

baby_died_photo

ಉಡುಪಿ, ಎಪ್ರಿಲ್ .29 : ಭೇದಿಯಿಂದ ಬಳಲುತ್ತಿದ್ದು ಮಣಿಪಾಲದ ಆಸ್ಪತ್ರೆಯೊಂದಕ್ಕೆ ದಾಖಲಿಸಲ್ಪಟ್ಟಿದ್ದ ಹತ್ತು ತಿಂಗಳ ಮಗುವೊಂದು ಚಿಕಿತ್ಸೆಗೆ ಸ್ಪಂದಿಸದೆ ಮೊನ್ನೆ ರಾತ್ರಿ ಕೊನೆಯುಸಿರೆಳೆದಿದ್ದು, ಇದಕ್ಕೆ ಮಗುವಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ನಗರದ ಕೃಷ್ಣಮೂರ್ತಿ ಕ್ಲಿನಿಕ್ ನ ವೈದ್ಯರೇ ಕಾರಣರೆಂದು ಆರೋಪಿಸಿ ಹೆತ್ತವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಮೂಲತಃ ಕುಂದಾಪುರದ ನಿವಾಸಿಗಳಾಗಿರುವ ಉಡುಪಿ ಡಯಟ್ ಬಾಲಕಿಯರ ಶಾಲೆಯಲ್ಲಿ ಪ್ರಾಧ್ಯಾಪಕರಾಗಿರುವ ಶೇಖರ ಬೋವಿ ಮತ್ತು ಅವರ ಪತ್ನಿ ಉಡುಪಿ ಖಜಾನೆಯ ಉದ್ಯೋಗಿ ಶ್ರೀಮತಿ ಅವರ 10 ತಿಂಗಳು ಪ್ರಾಯದ ಅದ್ರಿಕಾ ಮೃತ ಮಗು.

ಏ.2ರಂದು ಭೇದಿಯಿಂದ ನರಳುತ್ತಿದ್ದ ಮಗುವನ್ನು ಹೆತ್ತವರು ಉಡುಪಿಯ ಕೃಷ್ಣಮೂರ್ತಿ ಕ್ಲಿನಿಕ್ ನ ಡಾ.ಕೃಷ್ಣಮೂರ್ತಿ ಉಪಾಧ್ಯಾಯರಲ್ಲಿಗೆ ಕರೆದೊಯ್ದಿದ್ದು, ಅಲ್ಲಿ ಅವರು ಮಗುವಿಗೆ ಇಂಜೆಕ್ಷನ್ ನೀಡಿದ್ದರು. ಮರುದಿನ ಮಗುವಿಗೆ ಭೇದಿಯೊಂದಿಗೆ ವಾಂತಿಯೂ ಶುರುವಾಗಿದ್ದು, ಸಂಜೆ ಮತ್ತೆ ತೆರಳಿದ್ದರು. ಅವರ ಸಲಹೆಯ ಮೇರೆಗೆ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನಲ್ಲಿ ಡಿಪ್ರೆಶನ್ ಲಕ್ಷ್ಮಣಗಳಿರುವ ಬಗ್ಗೆ ಹೆತ್ತವರು ಅಲ್ಲಿಯ ನರ್ಸ್ ಗಳಿಗೆ ತಿಳಿಸಿದ್ದರೂ ಅವರು ಗಮನ ಕೊಟ್ಟಿರಲಿಲ್ಲವೆನ್ನಲಾಗಿದೆ.

ಏ.5ರಂದು ಬೆಳಿಗ್ಗೆ ಮಗು ಫಿಟ್ಸ್ ಗೊಳಗಾಗಿದ್ದು, ತೀವ್ರ ನಿಗಾ ವಿಭಾಗಕ್ಕೆ ಸ್ಥಳಾಂತರಿಸಿ ಇಲೆಕ್ಟ್ರಾಲ್ ಪರೀಕ್ಷೆ ನಡೆಸಿದಾಗ ರಕ್ತದಲ್ಲಿ ಕಡಿಮೆ ಪ್ರಮಾಣದ ಸೋಡಿಯಂ ಇರುವುದು ಪತ್ತೆಯಾಗಿದ್ದು, ಮಗು ಮತ್ತೆ ಫಿಟ್ಸ್ ಸೆಳೆತಕ್ಕೊಳಗಾದಾಗ ಏ.5ರಂದು ವೈದ್ಯರು ಬೇರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರು.

ಕಂಗಾಲಾದ ಹೆತ್ತವರು ಅದ್ರಿಕಾಳನ್ನು ಮಣಿಪಾಲದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು ಮಗುವಿನ ಮೂತ್ರಪಿಂಡಗಳು ಸದಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಡಯಾಲಿಸಿಸ್ ಮಾಡಬೇಕು ಎಂದು ತಿಳಿಸಿದ್ದರು. ಸಾಮಾನ್ಯವಾಗಿ ಸಣ್ಣ ಮಕ್ಕಳಿಗೆ ಡಯಾಲಿಸಿಸ್ ಮಾಡಲಾಗುವುದಿಲ್ಲ. ಆದರೆ ಈಗ ಅನಿವಾರ್ಯ ಸ್ಥಿತಿಯಿದೆ ಎಂದು ತಿಳಿಸಿಯೇ ಡಯಾಲಿಸಿಸ್ ಮಾಡಿದ್ದರೆನ್ನಲಾಗಿದೆ.

ಆದರೆ ಮಗು ಚೇತರಿಸಿಕೊಳ್ಳಲಿಲ್ಲ. ದಿನೇ ದಿನೇ ಆರೋಗ್ಯ ಹದಗೆಡುತ್ತಲೇ ಇದ್ದು, ಮೊನ್ನೆ ರಾತ್ರಿ ಕೊನೆಯುಸಿರೆಳೆದಿದೆ.

ಡಾ.ಕೃಷ್ಣಮೂರ್ತಿ ಉಪಾಧ್ಯಾಯ ಅವರು ಚಿಕಿತ್ಸೆ ನೀಡಿದ ಬಳಿಕವೇ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಪರಿಸ್ಥಿತಿ ದಿನೇದಿನೇ ಹದಗೆಟ್ಟಿದ್ದು, ಆಕೆಯ ಸಾವಿಗೆ ಅವರ ಚಿಕಿತ್ಸೆಯೇ ಕಾರಣ ಎಂದು ಮಗುವಿನ ತಂದೆ ಶೇಖರ ಬೋವಿ ದೂರಿನಲ್ಲಿ ಆಪಾದಿಸಿದ್ದಾರೆ.

ಉಡುಪಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment