ಕನ್ನಡ ವಾರ್ತೆಗಳು

ನೇಪಾಳದಲ್ಲಿ ರುದ್ರ ನರ್ತನ: ಮನೆಗೆ ಬರದೆ ಇಹಲೋಕ ತ್ಯಜಿಸಿದ ಕಾಸರಗೋಡಿನ ಯುವಕರು.

Pinterest LinkedIn Tumblr

Kasrgod_doctr_photo

ಕಾಸರಗೋಡು, ಏ.29: ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಳಿಕ ನಾಪತ್ತೆಯಾಗಿದ್ದ ಕಾಸರಗೋಡಿನ ಡಾ. ಇರ್ಷಾದ್ (23), ಕಣ್ಣೂರಿನ ಡಾ. ದೀಪಕ್ (23) ಮರಳಿ ಬಾರದ ಇಹಲೋಕಕ್ಕೆ ತೆರಳಿದ್ದಾರೆ.

ಮೊನ್ನೆ ಶನಿವಾರ ಬೆಳಗ್ಗೆಯಷ್ಟೇ ಊರಲ್ಲಿರುವ ತನ್ನ ಸ್ನೇಹಿತರಿಗೆ ಡಾ. ಇರ್ಶಾದ್ ಕರೆ ಮಾಡಿ ಮಾತನಾಡಿದ್ದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ ಇರ್ಶಾದ್ ಸುರಕ್ಷಿತವಾಗಿದ್ದಾರೆ, ಕಠ್ಮಂಡುವಿನ ರೆಡ್‍ಕ್ರಾಸ್ ಶಿಬಿರದಲ್ಲಿ ಇದ್ದಾರೆ ಎಂದು ಅವರ ಮನೆ ಮಂದಿಗೆ ನೇಪಾಳದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆತಂಕಗೊಂಡಿದ್ದ ಮನೆಮಂದಿ ಈ ಸುದ್ದಿ ಕೇಳಿ ನಿಟ್ಟಿಸಿರು ಬಿಟ್ಟಿದ್ದರು. ನಂತರ ದಿನ ಉರುಳಿದರೂ ಅವರು ಸಂಪರ್ಕಕ್ಕೆ ಲಭಿಸದಿರುವುದು ಮತ್ತೆ ಆತಂಕ ಉಂಟುಮಾಡಿತ್ತು. ಈ ನಡುವೆ ಮಂಗಳವಾರ ಸಂಜೆ 3 ಗಂಟೆಯ ಸುಮಾರಿಗೆ, ಡಾ. ಇರ್ಶಾದ್ ಕಠ್ಮಂಡುವಿನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆಂಬ ಸುದ್ದಿ ಲಭಿಸಿತ್ತು. ಅದಾಗಿ ಕೆಲವೇ ನಿಮಿಷಗಳಲ್ಲೇ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

2013ರಲ್ಲಿ ಕೋಝಿಕೋಡ್‍ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದ ಡಾ. ಇರ್ಶಾದ್, ವಯನಾಡ್ ಸೇರಿದಂತೆ ಹಲವಡೆ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೈದ್ಯ ಸ್ನೇಹಿತರಾದ ಕಣ್ಣೂರಿನ ಡಾ. ದೀಪಕ್ ಮತ್ತು ವಯನಾಡಿನ ಡಾ. ಅಬಿಸೂರಿ ಎಂಬವರೊಂದಿಗೆ ಶಿಮ್ಲಾ ಹಾಗೂ ದಿಲ್ಲಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಮೊನ್ನೆ ಬುಧವಾರವಷ್ಟೇ ಪ್ರವಾಸಕ್ಕೆಂದು ದಿಲ್ಲಿಯಿಂದಲೇ ಅವರು ಕಠ್ಮಂಡುವಿಗೆ ತೆರಳಿದ್ದರು.

ಮನೆಮಂದಿ ಕಠ್ಮಂಡುವಿಗೆ…

ಇರ್ಶಾದ್ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ಲಭಿಸದಿದ್ದ ಹಿನ್ನೆಲೆಯಲ್ಲಿ ಹಾಗೂ ನೇಪಾಳದಿಂದ ಬಂದ ಸುದ್ದಿಯಿಂದಾಗಿ ಸಹೋದರ ಲಿಯಾಖತ್ ಹಾಗೂ ಡಾ. ದೀಪಕ್‍ರ ಸಂಬಂಧಿಕರು ಕಠ್ಮಂಡುವಿಗೆ ತೆರಳಿದ್ದರು. ಈ ನಡುವೆ ಮಂಗಳವಾರ ಸಂಜೆ ತಾಚಿಂಗ್ ಆಸ್ಪತ್ರೆಯ ಶವಾಗಾರದಲ್ಲಿನ ಮೃತದೇಹಗಳನ್ನು ಪರಿಶೀಲಿಸಿದಾಗ ಇರ್ಷಾದ್ ಮತ್ತು ದೀಪಕ್‍ರ ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. . ಇಬ್ಬರ ಬಳಿ ಇದ್ದ ಗುರುತು ಚೀಟಿಗಳ ಸಹಾಯದಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೆಬಾಗಿಲು ವಿದ್ಯುತ್ ಮಂಡಳಿಯ ಅಧಿಕಾರಿ ಎ.ಎನ್. ಶಂಸುದ್ದೀನ್ ಎಂಬವರ ಪುತ್ರರಾಗಿರುವ ಇರ್ಶಾದ್, ಸಹೋದರಾದ ಅಝೀಝ್, ಡಾ. ಸಾದಿಕ್ ಹಾಗೂ ಹಾರಿಸ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತದೇಹಗಳನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಇಂದು ಅಥವಾ ನಾಡಿದ್ದು ಮೃತದೇಹಗಳನ್ನು ಮನೆಗೆ ತರುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮುಂದಿನ ಎರಡು ತಿಂಗಳಲ್ಲಿ ಡಾ. ಇರ್ಶಾದ್ ಹೊಸ ಬದುಕಿಗೆ ಕಾಲಿರಿಸುವವರಿದ್ದರು. ಜುಲೈಯಲ್ಲಿ ಅವರ ವಿವಾಹ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳೂ ನಡೆಯುತ್ತಿತ್ತು. ಮನೆಯಲ್ಲಿ ಸಂತಸದ ವಾತಾವರಣ ಇರುವಾಗಲೇ ವಿಧಿ ಮುನಿಸಿಕೊಂಡಿದೆ. ಮದುವೆ ಸಂಭ್ರಮಕ್ಕೆ ಹತ್ತಿರ ವಾಗಿದ್ದ ಮನೆ ಇದೀಗ ಸಾವಿನ ಸೂತಕದಿಂದ ಕಣ್ಣೀರಿಡುತ್ತಿದೆ.

Write A Comment