ಉಳ್ಳಾಲ, ಎ.27 : ದರ್ಗಾ ಝಿಯಾರತ್‌ಗೆಂದು ತನ್ನ ಪುತ್ರನ ಜತೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆಗೆಸೆಯಲ್ಪಟ್ಟ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ರವಿವಾರ ಸಂಭವಿಸಿದೆ. ಮೃತ ಮಹಿಳೆಯನ್ನು ಕೃಷ್ಣಾಪುರ ನಿವಾಸಿ ಮೈಮುನಾ (50) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೈಮುನಾ ತನ್ನ ಪುತ್ರ ಶಬೀರ್ ಜೊತೆಗೆ ರವಿವಾರ ಸ್ಕೂಟರ್‌ನಲ್ಲಿ ಕಲ್ಲಾಪುಗೆ ಮದುವೆಗೆಂದು ಹೋಗಿದ್ದರು. ವಿವಾಹ ಕಾರ್ಯಕ್ರಮ ಮುಗಿಸಿ ಉಳ್ಳಾಲ ದರ್ಗಾ ಉರೂಸ್‌ಗೆ ಹೋಗುತ್ತಿದ್ದರು. ಸ್ಕೂಟರ್ ತೊಕ್ಕೊಟ್ಟು ಸಹಾರಾ ಆಸ್ಪತ್ರೆಯ ಎದುರುಗಡೆ ತಲುಪಿದಾಗ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ, ಸಹ ಸವಾರೆ ಮೈಮುನಾ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಕಸ ವಿಲೇವಾರಿ ಮಾಡುವ ಲಾರಿ ಅವರ ಮೇಲೆ ಹರಿದು, ಮೈಮುನಾ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ ಮೈಮುನಾ ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಂಚಾರಕ್ಕೆ ಅಡಚಣೆ: ತೊಕ್ಕೊಟ್ಟುವಿನಲ್ಲಿ ರವಿವಾರ ನಡೆದ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯುಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೃಷ್ಣಾಪುರದಲ್ಲಿ ಮಡುಗಟ್ಟಿದ ಶೋಕ: ವಿವಾಹ ಕಾರ್ಯಕ್ರಮಕ್ಕೆ ಪುತ್ರನ ಜೊತೆ ತೆರಳಿದ್ದ ಮೈಮುನಾ ಕಾರ್ಯಕ್ರಮ ಮುಗಿಸಿ ಉಳ್ಳಾಲ ದರ್ಗಾ ಝಿಯಾರತ್‌ಗೆ ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಮನೆ ಮಂದಿಗೆ ತಿಳಿಯುತ್ತಿದ್ದಂತೆಯೇ ಮೃತರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.