ಕನ್ನಡ ವಾರ್ತೆಗಳು

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಗದಿಪಡಿಸಲಾದ ಸ್ಥಿರಾಸ್ತಿ ದರದ ಬಗ್ಗೆ ಶ್ರೀ ಜೆ.ಆರ್. ಲೋಬೊ ರವರ ಆಕ್ಷೇಪಣೆ ಹಾಗೂ ಪುನರ್ ಪರಿಶೀಲನೆಗೆ ಮನವಿ.

Pinterest LinkedIn Tumblr

Mcc_credai_meet_1

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳಿಗೆ ನಿಗದಿಪಡಿಲಾದ ದರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಸಮಾಲೋಚಿಸಲು ಸಭೆಯನ್ನು ಮನಪಾದ ಸಮಿತಿ ಸಭಾಂಗಣದಲ್ಲಿ ನಡೆಸಲಾಯಿತು.

ಉಪನೋಂದಣಾ ಕಚೇರಿಯಿಂದ ನಿಗದಿಪಡಿಸಲಾದ ಸ್ಥಿರಾಸ್ತಿಗಳ ಮಾರ್ಗದರ್ಶಿ ದರವನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಿ ನಿಗದಿಪಡಿಸುವಂತೆ ಶಾಸಕ ಜೆ.ಆರ್.ಲೋಬೋ ಅಧಿಕಾರಿಗಳಿಗೆ ಸಲಹೆ ನೀಡಿರುತ್ತಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಭೆಯ ಚರ್ಚೆಯ ಕೊನೆಯಲ್ಲಿ ಈ ಸಭೆಯ ನಡಾವಳಿಯನ್ನೇ ಆಕ್ಷೇಪವನ್ನಾಗಿ ದಾಖಲಿಸಿ ಸರಕಾರಕ್ಕೆ ಪುನರ್ ಪರಿಶೀಲನೆಗೆ ಮನವಿ ನೀಡುವುದಾಗಿ ತಿಳಿಸಿದರು.

Mcc_credai_meet_2

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಿಯ ಉಪನೋಂದಣಿ ಅಧಿಕಾರಿ ಕಚೇರಿಯ ಮಂಗಳೂರು ನಗರ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮೌಲ್ಯದ ಪರಿಷ್ಕರಣೆ ಕಾರ್ಯವನ್ನು ಸ್ಥಿರ ಸೊತ್ತುಗಳ ಮೌಲ್ಯಮಾಪನ ಉಪಸಮಿತಿ ವತಿಯಿಂದ ಮಾಡಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಾದ ಮೌಲ್ಯಮಾಪನ ಸಮರ್ಪಕವಾಗಿಲ್ಲ ಮಾತ್ರವಲ್ಲದೆ ಹಲವಾರು ರಸ್ತೆಗಳಿಗೆ ನಾಮಕರಣವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದ್ದು, ಮೇ 31ರ ಒಳಗೆ ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಪೊರೇಟರ್‌ಗಳು ವಿಮರ್ಶಿಸಿ ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಗಳಿಗೆ ಹೆಸರನ್ನು ನಿಗದಿಪಡಿಸುವಂತೆ ಶಾಸಕರು ಸೂಚಿಸಿದರು.

ಕ್ರೆಡೈ ಅಧ್ಯಕ್ಷ ಶ್ರೀ ಡಿ.ಬಿ.ಮೆಹ್ತಾ ಮಾತನಾಡಿ, ನಗರ ವ್ಯಾಪ್ತಿಯ ಅಡ್ಡ ರಸ್ತೆಗಳಿಗೆ ಹೆಸರು ಇಲ್ಲದ ಕಾರಣ ಪ್ರಮುಖ ರಸ್ತೆಯ ಹೆಸರನ್ನೇ ಅಡ್ಡ ರಸ್ತೆಗೂ ಸೂಚಿಸಲಾಗುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯ ಮೌಲ್ಯವನ್ನೇ ಅಡ್ಡ ರಸ್ತೆಗಳಿ ಆಸ್ತಿಗಳಿಗೂ ಅನ್ವಯಿಸಿರುವುದು ಸಮಂಜಸವಲ್ಲ ಎಂದರು.

Mcc_credai_meet_3 Mcc_credai_meet_4

ಸಮೀಕ್ಷೆ ಕುರಿತು ಸಮನ್ವಯ ಸಾಧಿಸುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಪೊರೇಟರ್‌ಗಳಿಗೆ ಮೇಯರ್ ಹಾಗೂ ಅಧಿಕಾರಿಗಳಿಗೆ ಕಮಿಷನರ್ ಸುತ್ತೋಲೆ ಕಳುಹಿಸಿ ಕಾರ್ಯಸೂಚಿ ಸಿದ್ಧಪಡಿಸಿ ಎಂದು ಅವರು ಸಲಹೆ ನೀಡಿದರು.

ಇನ್ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ ಫೌಂಡೇಶನ್‌ನ ಧರ್ಮರಾಜ್ ಮಾತನಾಡಿ, ತಾರ್ಕಿಕವಾಗಿ ಆಸ್ತಿಯ ಮೌಲ್ಯ ನಿಗದಿಗೊಳಿಸಬೇಕು ಎಂದರು.

ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ, ಕೇಶವ, ಪ್ರಕಾಶ್ ಬಿ.ಸಾಲ್ಯಾನ್, ಕಮಿಷನರ್ ಹೆಫ್ಸಿಬಾ ರಾಣಿ, ತಹಸೀಲ್ದಾರ್ ಮೋಹನ್ ರಾವ್, ಜಿಲ್ಲಾ ಸಹಾಯಕ ನೋಂದಣಾಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Write A Comment