ಕನ್ನಡ ವಾರ್ತೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ದ.ಕ.ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ.

Pinterest LinkedIn Tumblr

Cngrss_ofie_silanyasa_1

ಮಂಗಳೂರು, ಎ.25 : ಕೇಂದ್ರ ಸರಕಾರದ ಪುರಸ್ಕೃತ ಅಭಿವೃದ್ಧಿ ಯೋಜನೆಗಳ ಅನುದಾನ ಕಡಿತಗೊಳಿಸುವ ಮೂಲಕ ರಾಜ್ಯ ಬೊಕ್ಕಸಕ್ಕೆ 10 ಸಾವಿರ ಕೋಟಿ ರೂ.ಗೂ ಅಧಿಕ ಆರ್ಥಿಕ ಹೊರೆ ಹೊರಿಸಿ ಪ್ರಧಾನಿ ನರೇಂದ್ರ ಮೋದಿ ‘ಅಚ್ಛೇ ದಿನ್ ಆಯೇಗಾ’ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಗೆ ನಗರದ ಕದ್ರಿಯಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನ ಕಡಿತ ಮಾಡುತ್ತಿರುವುದರಿಂದ ದೇಶದ ಎಲ್ಲಾ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೂ ಆರ್ಥಿಕ ಹೊರೆ ಉಂಟಾಗಿದೆ. ಪ್ರಸಕ್ತ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಲು 4,698 ಕೋ.ರೂ. ಹೆಚ್ಚುವರಿ ಹಣವನ್ನು ವಿನಿಯೋಗಿಸಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Cngrss_ofie_silanyasa_2 Cngrss_ofie_silanyasa_3 Cngrss_ofie_silanyasa_5 Cngrss_ofie_silanyasa_6

ಕಾಂಗ್ರೆಸ್ ಮುಕ್ತ ಕರ್ನಾಟಕ ಸಾಧ್ಯವಿಲ್ಲ : ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಬಿಜೆಪಿ ಹೊರಟಿದೆ. ಆ ಕಾರಣಕ್ಕಾಗಿ ತಾನು ಮತ್ತೆ ಕರ್ನಾಟಕದಲ್ಲಿ ಚುನಾವಣೆಗೆ ನಿಂತು ಕಾಂಗ್ರೆಸನ್ನು ಗೆಲ್ಲಿಸುವ ಹೊಣೆ ಹೊರುತ್ತೇನೆ. ಆ ಮೂಲಕ ಬಿಜೆಪಿಯ ಸವಾಲನ್ನು ಸ್ವೀಕರಿಸುತ್ತೇನೆ ಎಂದವರು ಹೇಳಿದರು. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಕಾಂಗ್ರೆಸ್‌ನ ಸಾಧನೆಯನ್ನು ಜನತೆಗೆ ತಿಳಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬಡವರ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಪಡೆದ ಬಿಜೆಪಿ ಇಂದು ಬಡವರನ್ನು ಸಂಪೂರ್ಣವಾಗಿ ಮರೆತಿದೆ. ಫ್ಯಾಶಿಸ್ಟ್ ತತ್ವದಂತೆ ಸುಳ್ಳುಗಳನ್ನೇ ಪದೇ ಪದೇ ಹೇಳುತ್ತಾ ಸತ್ಯವಾಗಿಸಲು ಬಿಜೆಪಿಗರು ಶ್ರಮಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಭವನ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದೀರ್ಘಕಾಲದಲ್ಲಿ ಅಧಿಕಾರದಲ್ಲಿದ್ದರೂ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಿರಲಿಲ್ಲ. ಪ್ರಸಕ್ತ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ಗೆ ಶೀಘ್ರದಲ್ಲಿ ಕಟ್ಟಡ ನಿರ್ಮಾಣ:
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್‌ಗೆ ಕಂದಾಯ ಇಲಾಖೆಯ ಮೂಲಕ ದೊರೆತ ಕದ್ರಿಯಲ್ಲಿ 9 ಸೆಂಟ್ಸ್ ವಿಸ್ತೀರ್ಣದ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ ಶೀಘ್ರದಲ್ಲಿ ನಿರ್ಮಿಸಲಾಗುವುದು ಎಂದರು.

Cngrss_ofie_silanyasa_7 Cngrss_ofie_silanyasa_8 Cngrss_ofie_silanyasa_9 Cngrss_ofie_silanyasa_10 Cngrss_ofie_silanyasa_11

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ನಂತರ ಬಡವರ ಪರವಾಗಿರುವ ಸಿದ್ದರಾಮಯ್ಯ ರಂತಹ ಮುಖ್ಯಮಂತ್ರಿಯನ್ನು ನಾನು ಕಂಡಿಲ್ಲ ಎಂದು ಮುಖ್ಯಮಂತ್ರಿಯ ಅಭಿವೃದ್ಧಿ ಯೋಜನೆಗಳನ್ನು ಶ್ಲಾಘಿಸಿದರು. ಜಿಲ್ಲೆಯಲ್ಲಿರುವ ಮೂಲ ಗೇಣಿದಾರರ ಸಮಸ್ಯೆಯನ್ನು ಬಗೆಹರಿಸಲು ಮುಖ್ಯಮಂತ್ರಿ ಮುಂದಾಗಬೇಕು ಎಂದು ಪೂಜಾರಿ ಒತ್ತಾಯಿಸಿದರು.

ಸಮಾರಂಭದಲ್ಲಿ ರಾಜ್ಯ ಯುವಜನ ಸೇವೆ,ಕ್ರೀಡಾ ಸಚಿವ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಬಿ.ಎ. ಮೊಯ್ದಿನ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಾಜಿ ಮುಖ್ಯ ಸಚೇತಕ ಮುಹಮ್ಮದ್ ಮಸೂದ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಹಾಗೂ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಶಶಿಧರ ಹೆಗ್ಡೆ ವಂದಿಸಿದರು.

Write A Comment