ಕನ್ನಡ ವಾರ್ತೆಗಳು

ಬಿಜೆಪಿ ಸರಕಾರದ ಸದಸ್ಯತ್ವ 10 ಕೋಟಿ ದಾಟಿದ ಪ್ರಯುಕ್ತ ಸಂಭ್ರಮಾಚರಣೆ

Pinterest LinkedIn Tumblr

Bjp_10Crore_ members_1

ಮಂಗಳೂರು,ಎ.20 : ಬಿಜೆಪಿಯ ಪ್ರಾಮಾಣಿತೆಯನ್ನು ಪ್ರಶ್ನೆ ಮಾಡಲು ಕಾಂಗ್ರೆಸ್‌ ಹೊರಟಿದೆ. ಕಲ್ಲಿದ್ದಲು ಗಣಿ ಹಗರಣದ ಮೂಲಕ ಲಕ್ಷಾಂತರ ಕೋ. ರೂ. ದೇಶದ ಬೊಕ್ಕಸಕ್ಕೆ ನಷ್ಟವಾಗುವಂತೆ ಮಾಡಿದ, ಹಲವು ವರ್ಷಗಳಿಂದ ರೈತರ ಭೂಮಿ ಕಸಿದುಕೊಳ್ಳುವ ಕಾರ್ಯ ಮಾಡುತ್ತಾ ಬಂದಿರುವ, ಗರೀಬಿ ಹಠಾವೋ ಘೋಷಣೆ ಕೂಗುತ್ತಾ ವಾಸ್ತವದಲ್ಲಿ ತಮ್ಮ ಪಕ್ಷದ ನಾಯಕರ ಬಡತನ ನಿರ್ಮೂಲನ ಮಾಡಿದ ಕಾಂಗ್ರೆಸ್‌ಗೆ ದೇಶಕ್ಕೆ ಸ್ವಚ್ಚ ಹಾಗೂ ಜನಪರ ಆಡಳಿತ ನೀಡುತ್ತಿರುವ ಬಿಜೆಪಿಯ ಪ್ರಾಮಾಣಿಕತೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಹಸಂಚಾಲಕ ಸಿ.ಟಿ. ರವಿ ಅವರು ಬಿಜೆಪಿ ಸದಸ್ಯತ್ವ 10 ಕೋಟಿ ದಾಟಿದ ಪ್ರಯುಕ್ತ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Bjp_10Crore_ members_2 Bjp_10Crore_ members_4

ಬೊಕ್ಕಸ ತುಂಬಿಸಿದ ಬಿಜೆಪಿ:
ಗರೀಬಿ ಹಠಾವೋ’ ಎನ್ನುವ ಘೋಷಣೆಯನ್ನು ಕಾಂಗ್ರೆಸ್‌ ಹಲವು ವರ್ಷಗಳಿಂದ ಕೂಗುತ್ತಾ ಬಂದಿದ್ದರು. ಬಡವರ ಬಡತನ ದೂರವಾಗಲಿಲ್ಲ. ಬದಲಿಗೆ ಕಾಂಗ್ರೆಸ್‌ ನಾಯಕರ ಬಡತನ ನಿರ್ಮೂಲನವಾಯಿತು. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಕಲ್ಲಿದಲ್ಲು ಗಣಿಗಳನ್ನು ಬೇಕಾಬಿಟ್ಟಿ ಹಂಚಿ ಆ ಮೂಲಕ ದೇಶದ ಬೊಕ್ಕಸಕ್ಕೆ ಲಕ್ಷಾಂತರ ಕೋ. ರೂ. ಆದಾಯ ನಷ್ಟವಾಗುವಂತೆ ಮಾಡಿದ್ದರೆ ಇದೀಗ ಬಿಜೆಪಿ ಸರಕಾರ 240 ಗಣಿಗಳಲ್ಲಿ ಕೇವಲ 20 ಗಣಿಗಳನ್ನು ಹರಾಜು ಮಾಡಿ 2.06 ಲಕ್ಷ ಕೋ. ರೂ. ಆದಾಯವನ್ನು ದೇಶದ ಬೊಕ್ಕಸಕ್ಕೆ ತುಂಬಿಸಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಬೃಹತ್‌ ಮಟ್ಟದ 2ಜಿ ಹಗರಣ ನಡೆದಿದೆ ಎಂದು ಅವರು ಹೇಳಿದರು.

Bjp_10Crore_ members_5 Bjp_10Crore_-members_3

ಸದಸ್ಯತ್ವದಲ್ಲಿ ವಿಶ್ವ ದಾಖಲೆ:
2014ರ ನ. 1ರಂದು ಪ್ರಾರಂಭಗೊಂಡ ಬಿಜೆಪಿ ಸದಸ್ಯತ್ವ ಅಭಿಯಾನ ರಾಷ್ಟ್ರ ವ್ಯಾಪಿಯಾಗಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಎ. 18ರಂದು ಸಂಜೆ 4 ಗಂಟೆಗೆ 10 ಕೋಟಿ ಗಡಿ ದಾಟಿದೆ. ಆ ಮೂಲಕ ವಿಶ್ವದಲ್ಲಿ ಅತೀ ದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಕೆಗೆ ಪಾತ್ರವಾಗಿದೆ. ಚೀನದ ಕಮ್ಯೂನಿಸ್ಟ್‌ ಪಕ್ಷ 8.5 ಕೋಟಿ ಸದಸ್ಯರನ್ನು ಹೊಂದಿದೆ ಎಂದರು.

ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಬಿಜೆಪಿ ಅತ್ಯಂತ ಶಕ್ತಿಶಾಲಿ ಪಕ್ಷವಾಗಿ ಹೊರಹೊಮ್ಮಿದೆ. ಒಂದೊಮ್ಮೆ ತೃತೀಯ ಜಗತ್ತಿನ ರಾಷ್ಟ್ರಗಳ, ಆಲಿಪ್ತ ರಾಷ್ಟ್ರಗಳ, ಹಿಂದುಳಿದ ರಾಷ್ಟ್ರಗಳ ನಾಯಕನೆಂದು ಪರಿಗಣಿತವಾಗಿದ್ದ ಭಾರತ ಇಂದು ವಿಶ್ವ ನಾಯಕ ರಾಷ್ಟ್ರವಾಗಿ ಮೂಡಿಬರುತ್ತಿದೆ. ಭಾರತದ ಯೋಗಕ್ಕೆ ವಿಶ್ವಮನ್ನಣೆ ದೊರಕಿದ್ದು, ವಿಶ್ವಸಂಸ್ಥೆ ಜೂ. 21 ಅನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ ಎಂದರು.

ಸದಸ್ಯತ್ವ 10 ಕೋಟಿ ದಾಟಿದ ಸಂಭ್ರಮವನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಆಚರಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ರವಿಶಂಕರ್‌ ಮಿಜಾರ್‌, ಡಾ| ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

Write A Comment