ಕನ್ನಡ ವಾರ್ತೆಗಳು

ಅಕ್ರಮ ಪ್ರವೇಶ, ಪೈಪ್ ಜೋಡಣೆಯ ದುಸ್ಸಾಹಸ – ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ವಿರುದ್ಧ ದೂರು

Pinterest LinkedIn Tumblr

pipe_line_kedibi

ಸುರತ್ಕಲ್,ಎ.20  : ತನ್ನ ಖಾಸಗಿ ಜಮೀನಿಗೆ ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ಗುತ್ತಿಗೆದಾರರು ಅಕ್ರಮ ಪ್ರವೇಶ ಮಾಡಿ ಪೈಪ್ ಗಳನ್ನು ಜೋಡಿಸಿರುವುದರ ವಿರುದ್ಧ ರವೀಂದ್ರ ಹೆಗ್ಡೆ ಎಂಬವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿ ಪೈಪ್ ಗಳನ್ನು ತೆರವುಗೊಳಿಸಿ ಅಕ್ರಮ ಪ್ರವೇಶ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.

ಬಿಜೈ ನಿವಾಸಿ ರವೀಂದ್ರ ಹೆಗ್ಡೆ ಎಂಬವರು ಮಂಗಳೂರು ತಾಲೂಕಿನ ಬಾಳ ಗ್ರಾಮದಲ್ಲಿ 3.67 ಎಕ್ರೆ ಜಮೀನು ಹೊಂದಿದ್ದರು. ಈ ಜಮೀನು ಇವರು ವಾಸವಾಗಿರುವ ಪ್ರದೇಶದಿಂದ ದೂರದಲ್ಲಿದ್ದು ಎ.18 ರಂದು ಮಧ್ಯಾಹ್ನ ಜಮೀನು ವೀಕ್ಷಣೆಗೆಂದು ಬಂದಾಗ ಅಲ್ಲಿ ಅಕ್ರಮ ಪ್ರವೇಶ ಮಾಡಿ ಸುಮಾರು 10ಕ್ಕೂ ಹೆಚ್ಚು ಪೈಪ್ ಗಳನ್ನು ಜೋಡಿಸಿದ್ದು ಕಂಡು ಬಂದಿತ್ತು. ಈ ಬಗ್ಗೆ ಅಲ್ಲಿದ್ದ ಕಾರ್ಮಿಕರನ್ನು ವಿಚಾರಿಸಿದಾಗ ಇದು ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ಸಂಸ್ಥೆಗೆ ಸಂಬಂಧಿಸಿದ್ದು ಎಂಬ ಮಾಹಿತಿ ದೊರಕಿತ್ತು.

ಹಗ್ಡೆಯವರು ಕೂಡಲೇ ಬೈಕಂಪಾಡಿಯಲ್ಲಿರುವ ಕೆಐಡಿಬಿ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ತಮಗೆ ಯಾವುದೇ ನೋಟೀಸು ಮತ್ತು ಮಾಹಿತಿಯನ್ನು ನೀಡಿದ ಬಗ್ಗೆ ಸಮಪರ್ಕವಾದ ಉತ್ತರ ದೊರಕಿರಲಿಲ್ಲ. ಹೆಗ್ಡೆಯವರು ಈ ಬಗ್ಗೆ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿಗಳಿಗೂ ದೂರನ್ನು ನೀಡಿದ್ದಾರೆ.

ಭೂಸ್ವಾಧೀನಕ್ಕೆ ಸಂಬಂಧಪಟ್ಟ ಕಾನೂನಿನ ವಿಧಿ ವಿಧಾನಗಳನ್ನು ಪಾಲಿಸದೆ, ಭೂಮಾಲಕರಿಗೆ ಸರಿಯಾದ ನೋಟೀಸು ನೀಡದೆ ಬೋಗಸ್ ದಾಖಲೆಗಳ ಮೂಲಕ ಪೈಪ್ ಲೈನ್ ಗೆ ಭೂಸ್ವಾಧೀನವಾಗಿದೆ ಎಂಬ ಮಾಹಿತಿಯನ್ನು ಸರಕಾರಕ್ಕೆ ನೀಡಿದ ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ವಿಶೇಷ ಭೂಸ್ವಾಧೀನಾಧಿಕಾರಿಗಳು ಈಗ ಕೆಲಸವನ್ನು ಮುಗಿಸಿ ಬಿಡುವ ಆತುರದಿಂದ ಖಾಸಗಿ ಜಮೀನುಗಳಿಗೆ ನುಗ್ಗಿ ಪೈಪ್ ಶೇಖರಣೆ ಮಾಡಲು ಮತ್ತು ಪೈಪ್ ಲೈನ್ ಅಳವಡಿಸಲು ಗುತ್ತಿಗೆದಾರರನ್ನು ಪ್ರಚೋದಿಸುತ್ತಿದ್ದಾರೆ. ಎಲ್ಲೆಡೆ ಕಾನೂನಿನ ಅಡತಡೆಗಳನ್ನು ಎದುರಿಸುತ್ತಿರುವ ಇವರು ಒಂದು ಕಡೆ ಸರಕಾರ ಮತ್ತು ಇನ್ನೊಂದು ಕಡೆ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ಮೂಲಕ ಸರಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳದೇ ಇರುವುದಕ್ಕೆ ಕಾರಣೀಭೂತರಾಗಿದ್ದಾರೆ. ಭೂಸ್ವಾಧೀನ  ವಿಧ ವಿಧಾನಗಳನ್ನು ಗಾಳಿಗೆ ತೂರಿದ ಇವರ ಮೋಸ ಮತ್ತು ಗೂಂಡಾಗಿರಿಯ ವಿರುದ್ಧ ಪೈಪ್ ಲೈನ್ ಹಾದು ಹೋಗುವ ದಕ ಜಿಲ್ಲೆಯ 17 ಮತ್ತು ಉಡುಪಿ ಜಿಲ್ಲೆಯ ಏಳು ಗ್ರಾಮಸ್ಥರು ಕಾನೂನಿನ ಸಮರಕ್ಕೆ ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸುರತ್ಕಲ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Write A Comment