ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್ ಹಾಗೂ ಸತೀಶ್ ಕಾಪಿಕಾಡ್
ಮುಂಬಯಿ : ದೇವಾಡಿಗ ಸಂಘ ಮುಂಬಯಿ ಇದರ 90ನೇ ವಾರ್ಷಿಕೋತ್ಸವ ಸಮಾರಂಭವು ಎ. 18 ಮತ್ತು 19 ರಂದು ನವಿಮುಂಬಯಿ ನೇರೂಳ್ ನ ದೇವಾಡಿಗ ಭವನದಲ್ಲಿ ಅದ್ಧೂರಿಯಾಗಿ ಜರಗಲಿದೆ.
ಈ ಬಗ್ಗೆ ಎ. 12ರಂದು ನಗರದ ದಾದರ್ ನಲ್ಲಿರುವ ದೇವಾಡಿಗ ಸಂಘದ ಕಾರ್ಯಾಲಯದಲ್ಲಿ ಸಂಘದ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಪತ್ರಿಕಾಗೋಷ್ಥಿಯಲ್ಲಿ ಮಾಯಿತಿಯನ್ನು ನೀಡುತ್ತಾ ದೇವಾಡಿಗ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್ ದಾಸ್ ಅವರು ಸಂಘದ ಸ್ಥಾಪಕರನ್ನು ಸ್ಮರಿಸಿದರಲ್ಲದೆ, 2007ರ ಸಮಯದಲ್ಲಿ ಧರ್ಮಪಾಲ್ ದೇವಾಡಿಗರ ಅಧ್ಯಕ್ಷೀಯ ಅವಧಿಯಲ್ಲಿ ದೇವಾಡಿಗ ಭವನ ನಿರ್ಮಾಣ ಗೊಂಡಿದ್ದು ಸಂಘಟನೆಯಲ್ಲಿ ಒಂದು ಉತ್ತಮ ಬದಲಾವಣೆಯಾಗಿದೆ ಎಂದರು.
ಮುಂಬಯಿಯಲ್ಲಿ ಮಾತ್ರವಲ್ಲದೆ ತವರೂರಲ್ಲಿಯೂ ಈ ಸಂಘದ ಮೂಲಕ ಆರೋಗ್ಯ ಮಾಹಿತಿ ಶಿಬಿರವನ್ನು ಪ್ರಾರಂಭಿಸಲಾಗಿದೆ. 2010 – 11 ರಲ್ಲಿ ಅಲ್ಪಾವಧಿಯಲ್ಲೇ ಹತ್ತು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿ ಸಂಘದ ಕಾರ್ಯಕರ್ತರು ಸದಸ್ಯರ ಮನೆಗೆ ತಲಪಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತಾಗಿದೆ. ಪ್ರತೀ ವರ್ಷ ಸಮಾಜದ 5 – 6 ಅರ್ಹ ಮಕ್ಕಳನ್ನು ಈ ಸಂಸ್ಥೆ ಶಿಕ್ಷಣಕ್ಕಾಗಿ ಧತ್ತು ಸ್ವೀಕರಿಸುತ್ತಿರುದನ್ನು ಪತ್ರಕರ್ತರ ಗಮನಕ್ಕೆ ತರಲಾಯಿತು.
ಕನ್ನಡಿಗ ವರ್ಡ್ ಡಾಟ್ ಕಾಮ್ ನ ಮುಂಬಯಿ ಬ್ಯೂರೋದ ಮುಖ್ಯಸ್ತರೊಂದಿಗೆ ಮಾತನಾಡಿದ ಸಂಘದ ಕಾರ್ಯಕರ್ತರು ಸಂಘವು ಶತಮಾನೋತ್ಸವವಕ್ಕೆ ಸಮೀಪಿಸುತ್ತಿದ್ದು ನಮ್ಮ ಉದ್ದೇಶವು ಯುವ ಪೀಳಿಗೆಯನ್ನು ತಲಪಲು ದೇವಾಡಿಗ ಅಧಿವೇಶನದಲ್ಲಿ “ವಿಶನ್ 2025” ನ್ನು ಮಾಲತಿ ವಿ. ಮೊಯಿಲಿಯವರ ಹಸ್ತದಿಂದ ಎ. 19ರಂದು ಉದ್ಘಾಟಿಸಲಿರುವೆವು. ಸಮಾಜದ ಪ್ರತಿ ಮಕ್ಕಳು ಶೈಕ್ಷಣಿಕವಾಗಿ ಕನಿಷ್ಠ ಡಿಗ್ರಿಯಾದರೂ ಮಾಡಬೇಕೆಂಬುದೇ ನಮ್ಮ ಉದ್ದೇಶ ಎಂದ ನಿಕಟ ಪೂರ್ವ ಅಧ್ಯಕ್ಷರು ಮನೆಯಲ್ಲಿರುವ ಮಹಿಳೆಯರ ಆರೋಗ್ಯ ರಕ್ಷಣೆಗೆ ಸೂಕ್ತ ಉಪಾಯವನ್ನು ಕೈಗೊಳ್ಳುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವೂ ನಮ್ಮದಾಗಿದೆ ಎಂದರು.
ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯ ಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿಯವರ ಹಸ್ತದಿಂದ ಪ್ರಶಸ್ತಿ ವಿತರಣಾ ಸಮಾರಂಭವು ನಡೆಯಲಿದೆ. ದುಬಾಯಿಯ ಯುವ ಉಧ್ಯಮಿ, ಕೊಡುಗೈ ದಾನಿ, ಸಂಗೀತ ಕಲಾವಿದ ಹರೀಶ್ ಶೇರಿಗಾರ್ ರಿಗೆ ’’ದೇವಾಡಿಗ ಉದ್ಯೋಗ ರತ್ನ’ ಪ್ರಶಸ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 9 ಮಂದಿಗೆ ‘ದೇವಾಡಿಗ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಧರ್ಮಪಾಲ್ ಯು. ದೇವಾಡಿಗರಿಗೆ ‘ದೇವಾಡಿಗ ಸಮಾಜ ರತ್ನ ಪ್ರಶಸ್ತಿ’, ಗೋಪಾಲ್ ಎಮ್. ಮೊಯಿಲಿಯವರಿಗೆ ‘ದೇವಾಡಿಗ ಸೇವಾ ರತ್ನ ಪ್ರಶಸ್ತಿ’, ಡಾ .ಕೆ.ವಿ. ದೇವಾಡಿಗರಿಗೆ ‘ದೇವಾಡಿಗ ವೈದ್ಯ ರತ್ನ ಪ್ರಶಸ್ತಿ’, ಡಾ.ಬಿ.ಎಸ್.ಶೇರಿಗಾರ್ ರಿಗೆ ‘ದೇವಾಡಿಗ ಪ್ರಾಚಾರ್ಯ ರತ್ನ ಪ್ರಶಸ್ತಿ’, ಸಿಎ ದಿನಕರ್ ಅತ್ತಾವರರಿಗೆ ‘ದೇವಾಡಿಗ ವಿದ್ಯಾ ರತ್ನ ಪ್ರಶಸ್ತಿ’, ಡಾ. ಹರಿನ್ ಎಸ್.ಉಳ್ಳಾಲ್ ರಿಗೆ ‘ದೇವಾಡಿಗ ವಿಜ್ಞಾನ ರತ್ನ ಪ್ರಶಸ್ತಿ’, ನಾಗೇಶ್ ಬಪ್ಪನಾಡುರಿಗೆ ‘ದೇವಾಡಿಗ ನಾದ ರತ್ನ ಪ್ರಶಸ್ತಿ’, ಗುಣಪಾಲ್ ಉಡುಪಿ ಅವರಿಗೆ ‘ದೇವಾಡಿಗ ಕಲಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹದಿನಾರು ಮಂದಿಗೆ ದೇವಾಡಿಗ ಶ್ರೀ, ನಾಲ್ಕು ಮಂದಿ ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ದೇವಾಡಿಗ ಕ್ರೀಡಾ ಭೂಷಣ, ಇತರ ಸಮಾಜದ ಐವರು ಸಾಧಕರಿಗೆ ದೇವಾಡಿಗ ಸನ್ಮಿತ್ರ, ಎಂಟು ಮಂದಿಗೆ ಸಾಧನ ಪ್ರಶಸ್ತಿ, 65 ವರ್ಷಕ್ಕಿಂತ ಹಿರಿಯರಾದ ಸಂಘದ ಮಾಜಿ ಅಧ್ಯಕ್ಷರುಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.
ಗೋಷ್ಠಿಯಲ್ಲಿ ಸಿಲೆಬ್ರೇಶನ್ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಅಧ್ಯಕ್ಷ ವಾಸು ಎಸ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ. ದೇವಾಡಿಗ, ಗೋಪಾಲ ಮೊಯಿಲಿ, ಗಣೇಶ್ ಶೇರಿಗಾರ್, ಮೋಹನ್ ದಾಸ್ ಅತ್ತಾವರ್, ಕೆ. ಎನ್. ದೇವಾಡಿಗ, ರವಿ ದೇವಾಡಿಗ, ಅಶೋಕ್ ತಿಮ್ಮಪ್ಪ ದೇವಾಡಿಗ ಉಪಸ್ಥಿತರಿದ್ದರು.