ಕನ್ನಡ ವಾರ್ತೆಗಳು

ಪಿಲಿಕುಳ ನಿಸರ್ಗಧಾಮದ ಗುತ್ತಿನಮನೆಯಲ್ಲಿ ಬಿಸು ಆಚರಣೆ : ಬಿಸು ಕಣಿ ಇಡುವ ಮೂಲಕ ಚಾಲನೆ

Pinterest LinkedIn Tumblr

bisu_pilikula_1

ಮಂಗಳೂರು, ಎ.15: ತುಳುನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಬಿಸು ಪರ್ಬ (ವಿಷು ಹಬ್ಬ)ದ ಅಂಗವಾಗಿ ಮಂಗಳವಾರ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತಿನಮನೆಯಲ್ಲಿ ಬಿಸು ಆಚರಣೆ ನಡೆಯಿತು. ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ಬಿಸು ಪರ್ಬದಲ್ಲಿ ಬಿಸು ಕಣಿ ಇಡುವ ಮೂಲಕ ಬೆಳಗ್ಗೆ ಕಾರ್ಯಕ್ರಮ ಆರಂಭಗೊಂಡಿತು.

ಕಣಿ ಇಡುವ ಕುರಿತಂತೆ ಮಾಹಿತಿ ನೀಡಿ ಮಾತನಾಡಿದ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ವಿವೇಕ ರೈ, ಪಿಲಿಕುಳದ ಗುತ್ತಿನ ಮನೆಯಲ್ಲಿ ಈ ದಿನ ಚರಿತ್ರಾರ್ಹ ದಿನವೆಂದು ಬಣ್ಣಿಸಿದರು.

bisu_pilikula_4

 

ತುಳುವಿನ ಪಗ್ಗು ತಿಂಗಳ ಸಂಕ್ರಮಣದ ಮಾರನೆಯ ದಿನವನ್ನು ಬಿಸು ಹಬ್ಬವನ್ನಾಗಿ ಆಚರಿ ಸಲಾಗುತ್ತದೆ. ಸಮೃದ್ಧ ಕೃಷಿ ಆಶಯದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬಾಳೆ ಎಲೆಯ ಮೇಲೆ ಅಕ್ಕಿ ಹಾಗೂ ತೆಂಗಿನ ಕಾಯಿ ಇರಿಸಿ ತಮ್ಮ ಮನೆಯಲ್ಲೇ ಬೆಳೆಯಲಾಗುವ ಭತ್ತ, ತೆಂಗು, ಬಾಳೆ, ಅಡಿಕೆ, ಕಾಳುಮೆಣಸು, ತರಕಾರಿ ಹಾಗೂ ಹಣ್ಣುಹಂಪಲುಗಳು, ಕರಕುಶಲ ವಸ್ತುಗಳನ್ನು ಜೋಡಿಸಿ ದೀಪಹಚ್ಚಿ ಕೈಮುಗಿದು ಮನೆಯ ಕಿರಿಯರು ಮನೆ ಹಿರಿಯರ ಆಶೀರ್ವಾದ ಪಡೆಯ ಲಾಗುತ್ತದೆ. ಮನೆಯ ಹಿತ್ತಲಿನಲ್ಲೇ ಬೆಳೆದ ತರಕಾರಿಯಿಂದ ತಯಾರಿಸಿದ ಸಿಹಿಯೂಟವನ್ನು ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ನಶಿಸುತ್ತಿರುವಂತೆಯೇ ಆಚರಣೆಗಳೂ ಮರೆ ಯಾಗುತ್ತಿವೆ. ಇದು ಪಿಲಿಕುಳದ ಗುತ್ತಿನಮನೆ ಯಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಸಕ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರ ಮುತುವರ್ಜಿಯ ಮೇರೆಗೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

bisu_pilikula_5

ಪಿಲಿಕುಳದ ಸಂಸ್ಕೃತಿ ಗ್ರಾಮ ಕೇವಲ ಶೋ ಪೀಸ್ ಅಲ್ಲ. ಕಳೆದು ಹೋಗುತ್ತಿರುವ ತುಳುನಾಡಿನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿ ನಲ್ಲಿ ಬಹಳ ಶ್ರಮದೊಂದಿಗೆ ಪಿಲಿಕುಳದಲ್ಲಿ ವಿಶಾಲ ವಾತಾವರಣದಲ್ಲಿ ಸಂಸ್ಕೃತಿ ಗ್ರಾಮವನ್ನು ರಚಿಸಲಾಗಿದೆ. ಈಗಾಗಲೇ ಇಲ್ಲಿ ಆಟಿಡೊಂಜಿ ದಿನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದೀಗ ಈ ವರ್ಷದಿಂದ ‘ಬಿಸು ಪರ್ಬ’ವನ್ನು ಆಚರಿಸಲಾಗುತ್ತಿದೆ ಎಂದು ಪ್ರೊ.ವಿವೇಕ ರೈ ಹೇಳಿದರು.

bisu_pilikula_2 bisu_pilikula_3

ಬಿಸು ಕಣಿ ವಿಶೇಷ..

ತುಳುನಾಡಿನಲ್ಲಿ ಬಿಸು ಪರ್ಬವನ್ನು ಆಚರಿಸ ಲಾಗುತ್ತದೆಯಾದರೂ ಮನೆಗಳಲ್ಲಿ ಕಣಿ ಇಡುವ ಸಂಪ್ರದಾಯ ತೀರಾ ವಿರಳ. ಹಾಗಾಗಿ ಮಂಗಳವಾರ ಗುತ್ತಿನ ಮನೆಯಲ್ಲಿ ಇರಿಸಲಾಗಿದ್ದ ಬಿಸು ಕಣಿ ಯನ್ನು ಯುವಕರು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಹಿರಿಯರಿಂದ ವಿವರ ಪಡೆಯುತ್ತಿದ್ದುದು ಕಂಡುಬಂತು. ಕೇಪುಳ ಹೂ, ತೆಂಗಿನಕಾಯಿ, ಬಾಳೆಗೊನೆ, ಎಳನೀರು ಗೊನೆ, ಹಲಸು, ನೇರಳೆ, ಅಡಿಕೆ, ಬದನೆ, ಬೆಂಡೆಕಾಯಿ, ತೊಂಡೆಕಾಯಿ, ಗೇರು, ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ ಸೇರಿದಂತೆ ತುಳುನಾಡಿನಲ್ಲಿ ಬೆಳೆಯುವ ಎಲ್ಲಾ ರೀತಿಯ ತರಕಾರಿ ಹಣ್ಣು ಹಂಪಲುಗಳನ್ನು ಜೋಡಿಸಿಡಲಾಗಿತ್ತು.

ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಬಿಸು ಕಣಿಗೆ ಬದನೆಕಾಯಿಯನ್ನು ಇಡುವ ಮೂಲಕ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಗುತ್ತಿನ ಮನೆಗಳು ಇಂದು ಅಪರೂಪವಾಗುತ್ತಿದ್ದು, ಆಚರಣೆಗಳು ಮರೆಯಾಗುತ್ತಿರುವ ಈ ಸಂದರ್ಭ ದಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯಲ್ಲಿ ಮಣ್ಣಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಅತೀ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರನ್ನು ಹೊರತುಪಡಿಸಿ ಉಳಿದವರಿಗೆ 200 ರೂ. ಕೂಪನ್ ವ್ಯವಸ್ಥೆ ಮಾಡಲಾಗಿತ್ತು. ಕೂಪನ್ ಪಡೆದವರಿಗೆ ಬೆಳಗ್ಗಿನಿಂದ ಸಂಜೆಯ ವರೆಗೆ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನ, ದೋಣಿವಿಹಾರ ಕೇಂದ್ರ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಸ್ಯಕಾಶಿ, ಔಷಧಿ ವನ ಮತ್ತು ಕುಶಲಕರ್ಮಿ ಗ್ರಾಮಕ್ಕೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಜಿ.ಪಂ. ಸಿಇಒ ಶ್ರೀವಿದ್ಯಾ, ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ, ನಾ. ದಾಮೋದರ ಶೆಟ್ಟಿ, ಪ್ರೊ.ಚೌಟ, ಯಶವಂತಿ ಆಳ್ವ, ವಿಜಯಲಕ್ಷ್ಮಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

bisu_pilikula_6a

ಗಣ್ಯರಿಂದ ಅತಿಥಿ ಸತ್ಕಾರ – ಬಾಯಿ ಚಪ್ಪರಿಸಿದ ಅತಿಥಿಗಳು

ಬಿಸು ಪರ್ಬದ ಮಧ್ಯಾಹ್ನದ ಭೋಜನದ ಅಂಗವಾಗಿ ತುಳುನಾಡಿನ ಸಾಂಪ್ರದಾಯಿಕ ಅಡುಗೆಗಳ ಭೂರಿ ಭೋಜನವನ್ನು ಆಯೋಜಿಸಲಾಗಿತ್ತು. ಬಿಸು ಪರ್ಬದಲ್ಲಿ ಗಣ್ಯರಾದ ಪ್ರೊ.ವಿವೇಕ ರೈ, ಪಿಲಿಕುಳ ವಿಜ್ಞಾನ ಕೇಂದ್ರದ ಡಾ.ಕೆ.ವಿ.ರಾವ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಪಿಲಿಕುಳ ನಿಸರ್ಗಧಾಮದ ಪ್ರಭಾಕರ ಶರ್ಮಾ, ಎನ್.ಜಿ.ಮೋಹನ್ ಮೊದಲಾದ ಗಣ್ಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟುಕೊಂಡು ಊಟ ಬಡಿಸುವ ಮೂಲಕ ಗಮನಸೆಳೆದರು.

ನೆಲದ ಮೇಲೆ ಹಾಗೂ ಟೇಬಲ್ ಮೇಲೆ ಎಲೆಯಲ್ಲಿ ಊಟದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಊಟದ ಜತೆಯಲ್ಲೇ ಗುತ್ತಿನ ಮನೆಯ ಸೊಬಗನ್ನು ಆನಂದಿಸುವ ಅವಕಾಶವೂ ಅತಿಥಿಗಳಿಗೆ ಲಭ್ಯವಾಗಿತ್ತು. ಭೋಜನದಲ್ಲಿ ಉಪ್ಪಿನಕಾಯಿ, ಮಾವಿನ ಕಾಯಿ ಚಟ್ನಿ, ಹೆಸರುಬೇಳೆ ಕೋಸಂಬ್ರಿ, ಅಲಸಂಡೆ ಪಲ್ಯ, ಗೇರು, ತೊಂಡೆ ಉಪ್ಪುಕರಿ, ಮೂಡೆ, ಹೆಸರು ಚೀನಿಕಾಯಿ ಗಸಿ, ಅನ್ನ, ಗುಜ್ಜೆ- ಅಲಸಂಡೆ ಬೀಜ ಗಸಿ, ಹುರುಳಿ ಸಾರು, ಮುಳ್ಳುಸೌತೆ ಗಟ್ಟಿ, ಹಪ್ಪಳ, ಸಂಡಿಗೆ, ಮಾವಿನಹಣ್ಣಿನ ಸಾಸಿವೆ, ಸೌತೆ ಸಾಂಬರ್, ಬದನೆ ಬೋಳುಹುಳಿ, ಮಜ್ಜಿಗೆ ಹುಳಿ, ಹೋಳಿಗೆ, ಹೆಸರುಬೇಳೆ ಪಾಯಸ, ಬಾಳೆಹಣ್ಣು ಪೋಡಿ, ಜೀಗುಜ್ಜೆ ಪೋಡಿ, ಗೆಣಸು ಪೋಡಿ ಮೊದಲಾದ ರುಚಿಕರ ಖಾದ್ಯಗಳನ್ನು ಅತಿಥಿಗಳು ತಿಂದು ಬಾಯಿ ಚಪ್ಪರಿಸಿದರು.

Write A Comment