ಕುಂದಾಪುರ: ಖಾಸಗಿ ಶಾಲೆಯೊಂದಕ್ಕೆ ಆರ್.ಟಿ.ಇ ಕಾಯ್ದೆಯಡಿಯಲ್ಲಿ ಮಗುವನ್ನು ಸೇರಿಸುವ ಕುರಿತಂತೆ ಪೋಷಕರಿಂದ ಲಂಚ ಪಡೆಯುತ್ತಿದ್ದ ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ಅಧಿಕಾರಿ ನಿತ್ಯಾನಂದ ಆಚಾರ್ಯ ಕಂಬದಕೋಣೆಯಲ್ಲಿ ಉಡುಪಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಘಟನೆಯ ವಿವರ: ಪ್ರತಿಷ್ಠಿತ ಖಾಸಗಿ ಶಾಲೆಯೊಂದಕ್ಕೆ ಸರಕಾರಿ ಕೋಟಾದಡಿಯಲ್ಲಿ ಮಗುವಿಗೆ ಎಲ್.ಕೆ.ಜಿ. ಸೀಟು ಪಡೆಯುಲು ಪೋಷಕರು ಅಪೇಕ್ಷಿಸಿದ್ದರು. ಈ ವಿಚಾರ ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಕಾಲ್ತೋಡು ವಿಭಾಗದ ಸಂಪನ್ಮೂಲಾಧಿಕಾರಿ ನಿತ್ಯಾನಂದ ಆಚಾರ್ಯ ಅವರಿಗೆ ತಿಳಿದಿತ್ತು. ತನಗೆ ಹಣ ನೀಡಿದರೆ ಖಾಸಗಿ ಶಾಲೆಯಲ್ಲಿ ಸೀಟು ಕೊಡಿಸುವುದಾಗಿ ಪೋಷಕರಿಗೆ ಬಳಿ ಹೇಳಿದ್ದ ನಿತ್ಯಾನಂದ, 10,000ರೂಪಾಯಿಗಳ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಶರತ್ತಿಗೆ ಮಣಿದ ಮಗುವಿನ ತಂದೆ ಗಂಗಾಧರ್ 8,000 ರೂಪಾಯಿ ನೀಡಲು ಡೀಲ್ ಕುದುರಿಸಿದ್ದರು.
ಈ ನಡುವೆ ಸಿ.ಆರ್.ಪಿಯ ಲಂಚಾವರತಾರದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅವರ ಸಲಹೆಯಂತೆ ಇಂದು ಕಂಬದಕೋಣೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ಹಣ ಪಡೆಯುವಂತೆ ನಿತ್ಯಾನಂದನಿಗೆ ಪೋಷಕರು ತಿಳಿಸಿದ್ದರು. ನಿತ್ಯಾನಂದ ಅವರು ತಿಳಿಸಿದ ಸ್ಥಳಕ್ಕೆ ಬಂದು 8000ರೂ ಹಣ ಪಡೆಯುತ್ತಿದ್ದ ವೇಳೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಸ್ಥಳದಲ್ಲಿಯೇ ಹಿಡಿದಿದ್ದಾರೆ.
ಉಡುಪಿ ಲೋಕಾಯುಕ್ತ ಡಿವೈಎಸ್ಪಿ ನಾಗೇಶ್ ಶೆಟ್ಟಿ, ಲೋಕಾಯುಕ್ತ ಉಪ ನಿರೀಕ್ಷಕರುಗಳಾದ ಕೃಷ್ಣಾನಂದ ನಾಯ್ಕ್, ಮೋಹನ ಕೊಠಾರಿ ದಾಳಿ ನಡೆಸಿದ್ದರು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.