ಕನ್ನಡ ವಾರ್ತೆಗಳು

ಶಿವಮೊಗ್ಗ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಆಸ್ತಿಗಾಗಿ ಮನೆ ಮಗನನ್ನೇ ಕೊಂದು ಕೋಮು ಬಣ್ಣ ಹಚ್ಚಿದ 6 ಆರೋಪಿಗಳ ಬಂಧನ

Pinterest LinkedIn Tumblr

Shivamogga_Murder_Case

ಶಿವಮೊಗ್ಗ: ಆಸ್ತಿಗಾಗಿ ಮನೆ ಮಗನನ್ನೇ ಕೊಂದು ಬಳಿಕ ಈ ಕ್ರತ್ಯ ಮರೆಮಾಚಲು ಕೋಮುಗಲಭೆಯ ಬಣ್ಣ ಹಚ್ಚಿದ ನಿಗೂಢ ಪ್ರಕರಣವನ್ನು ಬೇಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಿದ ಪೊಲೀಸರು ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೃತನ ಅಕ್ಕನ ಮಗ ಅರುಣಕುಮಾರ್‌ (25), ಮೃತನ ಚಿಕ್ಕಮ್ಮನ ಮಗ ಅರುಣ (24), ಸಚಿನ್‌ (23), ಮೃತನ ಅಕ್ಕ ದಾಕ್ಷಾಯಿಣಮ್ಮ (40), ಮೃತನ ಅಕ್ಕನ ಮಗಳು ನೇತ್ರಾವತಿ (28) ಹಾಗೂ ಶ್ವೇತಾ (20) ಬಂಧಿತ ಆರೋಪಿಗಳು.

ಕೊಂದು ಎಸೆದ ಮನೆಯವರು:  ಶಿವಮೊಗ್ಗಾದಲ್ಲಿ ಫೆ.19ಕ್ಕೆ  ಪಿಎಫ್‌ಐ ಸಂಘಟನೆ ಹಮ್ಮಿಕೊಂಡಿದ್ದ ರ್ಯಾಲಿ ವೇಳೆ ಘರ್ಷಣೆ, ಹಾಗೂ ಕೋಮುಗಲಭೆ ನಡೆದ ಬೆನ್ನಲ್ಲೇ ಫೆ.20ಕ್ಕೆ ಮಂಜುನಾಥನ ಶವ  ನಗರದ ಚಿತ್ರಮಂದಿರವೊಂದರ ಸಮೀಪದ ಖಾಲೀ ಜಾಗದಲ್ಲಿ ದೊರೆತಿತ್ತು. ಗಲಭೆ ವೇಳೆ ಮಂಜುನಾಥನ ಕೊಲೆ ಮಾಡಲಾಗಿದೆಯೆಂಬ ಹಲವು ಪುಕಾರು ಕೂಡ ಹಬ್ಬಿತ್ತು. ಆದರೇ ಹತ್ಯೆ ನಡೆದಿರುವುದು ಕೋಮುದ್ವೇಷ ದಿಂದ ಅಲ್ಲ, ಬದಲಿಗೆ ಮೃತನ ಸಂಬಂಧಿಗಳೇ ಜಾಗದ ತಕರಾರು ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂಬ ಸಂಗತಿ ಪೊಲೀಸು ತನಿಖೆ ವೇಳೆ ಹೊರಬಿದ್ದಿದೆ. ಫೆ. 20ರಂದು ರಾತ್ರಿ ಮಂಜುನಾಥನನ್ನು ಮನೆಗೆ ಕರೆದು ಕೊಲೆ ಮಾಡಿದ್ದಾರೆ. ನಂತರ ಪದ್ಮಾ ಟಾಕೀಸ್‌ ಹಿಂಭಾಗದ ಖಾಲಿಜಾಗದಲ್ಲಿ ದೇಹವನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮಂಜುನಾಥ ನಿವೇಶನದ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದ. ನಗರದಲ್ಲಿ ಕೋಮುಗಲಭೆ ನಡೆಯುತ್ತಿದ್ದು, ಇದಕ್ಕಾಗಿಯೇ ಕೊಲೆ ನಡೆದಿದೆ ಎಂದು ಪ್ರಕರಣ ಮುಚ್ಚಿ ಹಾಕುವ ತಂತ್ರ ರೂಪಿಸಿದ ಆರೋಪಿಗಳು ಮಂಜುನಾಥನನನು ಕೊಂದು ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆಯನ್ನು ಶಿವಮೊಗ್ಗದ ಡಿವೈಎಸ್‌ಪಿ ಡಾ.ರಾಮ್‌.ಎಲ್‌.ಅರಸಿದ್ಧಿ ನೇತೃತ್ವದ ತಂಡಕ್ಕೆ ವಹಿಸಲಾಗಿತ್ತು. ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಪಿಐ ಎಸ್‌.ಎಂ.ದೀಪಕ್‌ ಮತ್ತು ಕುಮಾರ್‌, ಪಿಎಸ್‌ಐ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಡಿಜಿಪಿ ಓಂಪ್ರಕಾಶ್‌ ಶ್ಲಾಘ್ಹಿಸಿ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Write A Comment