ಅಂತರಾಷ್ಟ್ರೀಯ

ಯೆಮನ್ ನರಕದಿಂದ ಸುರಕ್ಷಿತವಾಗಿ ಬಂದ ಕುಂದಾಪುರ ಮೂಲದ ಬಿ.ಕೃಷ್ಟ್ರಾಯ ಪೈ; ಭಾರತ ಸರಕಾರದ ಕಾರ್ಯಕ್ಕೆ ಮೆಚ್ಚುಗೆ

Pinterest LinkedIn Tumblr

 

Yemen-evacuation

ಕುಂದಾಪುರ : ಯೆಮನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಭಾರತ ಸರಕಾರ ವಹಿಸಿದ ಕಾಳಜಿ ಮತ್ತು ಸರಕಾರ ನಡೆಸಿದ ಕಾರ್ಯಚರಣೆ ಪ್ರಶಂಸನೀಯವಾದುದು ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಂಡ್ಯ ಕೃಷ್ಟ್ರಾಯ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಯೆಮನ್‌ನಿಂದ ಮುಂಬೈ ಬಂದಿಳಿದ್ದ ಅವರು ಮುಂಬೈನಲ್ಲಿರುವ ತಮ್ಮ ಕುಟುಂಬ ಸದಸ್ಯರೊಂದಿಗೆ ಯೆಮನ್ ಪ್ರವಾಸದ ಅನಿಸಿಕೆ ಹಂಚಿಕೊಂಡರು.

ಆಡಿಟ್ ನಿಮಿತ್ತ ಯೆಮನ್‌ಗೆ ತೆರಳಿದ್ದ ಪೈಯವರು ಮಾ.26ರಂದು ಮುಂಬೈಗೆ ವಾಪಾಸಾಗಬೇಕಿತ್ತು. ಆದರೆ ಅಂದು ಯೆಮನ್‌ನಲ್ಲಿ ನಡೆದ ಗುಂಡಿನ ದಾಳಿ ಹಾಗೂ ಗಲಭೆಯಿಂದ ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಎಲ್ಲಾ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಗಲಭೆಪೀಡಿತ ಯೆಮನ್‌ನಿಂದ ಸುಮಾರು 300 ಕಿ.ಮೀ. ದೂರದ ಹಳ್ಳಿಯೊಂದರಲ್ಲಿ ನಾನು ಹಾಗೂ ಐ‌ಎಸ್‌ಒ ಕಂಪೆನಿಯ ಸುಮಾರು 75 ಮಂದಿ ನೌಕಕರು ಸುರಕ್ಷಿತವಾಗಿದ್ದೆವು. ಯೆಮನ್‌ನಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿದ್ಯಮಾನಗಳ ಬಗ್ಗೆ ಮಾಹಿತಿ ದೊರೆಯುತ್ತಿತ್ತು. ಹೀಗಾಗಿ ಸ್ವಲ್ಪ ಆತಂಕ ನಮ್ಮಲ್ಲಿ ಎದುರಾಗಿತ್ತು. ಇದೇ ಸಂದರ್ಭ ಐ‌ಎಸ್‌ಒ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವರು ನಮ್ಮನ್ನು ಸುರಕ್ಷಿತವಾಗಿ ಭಾರತ ದೇಶಕ್ಕೆ ಮರಳಲು ಸಕಲ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ನಮಗೆ ಧೈರ್ಯ ತುಂಬಿದ್ದರು ಎಂದು ಅವರು ವಿವರಿಸಿದರು.

ಭಾರತೀಯ ಭೂಸೇನೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹಡಗಿನ ಮೂಲಕ ಆಫ್ರಿಕಾ ದೇಶದ ಜಿಬೂತಿ ಬಂದರಿಗೆ ಕರೆತಂದರು. ಸುಮಾರು 15 ಗಂಟೆಗಳ ಈ ಪ್ರಯಾಣ ಸಂದರ್ಭ ಭಾರತೀಯ ಭೂಸೇನೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ತಾವು ಬಳಸುತ್ತಿದ್ದ ಪ್ರತಿಯೊಂದು ಸೌಲಭ್ಯಗಳನ್ನು ನಮಗಾಗಿ ನೀಡಿದ್ದರು. ನಮಗೆ ಯಾವುದೇ ತೊಂದರೆಯಾಗದಂತೆ, ಉತ್ತಮ ಆಹಾರ, ಹಿರಿಯ ನಾಗರಿಕರು, ಮಹಿಳೆಯರನ್ನು ಕೂಡ ಉತ್ತಮವಾಗಿ ನೋಡಿಕೊಂಡರು. ಬಳಿಕ ಜಿಬೂತಿ ಬಂದರಿನಿಂದ ಭಾರತೀಯ ಸೇನೆಯ ವಿಮಾನದ ಮೂಲಕ ಸುರಕ್ಷಿತವಾಗಿ ನಮ್ಮೆಲ್ಲರನ್ನು ಮುಂಬೈಗೆ ಕರೆ ತಂದಿದ್ದಾರೆ. ಭಾರತ ಸರಕಾರದ ಹಾಗೂ ಸೇನೆಯ ಈ ಕಾರ್ಯಚರಣೆ ಶ್ಲಾಘನೀಯವಾದುದು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಯೆಮನ್‌ನಿಂದ ಮುಂಬೈಗೆ ಬಂದಿಳಿದ ಎಲ್ಲಾ ಭಾರತೀಯರಿಗೆ ಮುಂಬೈ ಸರಕಾರ ತಾತ್ಕಾಲಿಕ ಪರಿಹಾರ ರೂಪದಲ್ಲಿ ೩ ಸಾವಿರ ರೂ.ಗಳನ್ನು ನೀಡಿದೆ. ತಮಿಳುನಾಡು ಹಾಗೂ ಕೇರಳ ಸರಕಾರಗಳು ತಮ್ಮ ರಾಜ್ಯದ ಜನರಿಗಾಗಿ ಆಯಾ ರಾಜ್ಯಗಳಿಗೆ ತೆರಳುವ ರೈಲಿನಲ್ಲಿ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಇಂತಹ ಯಾವುದೇ ವ್ಯವಸ್ಥೆ ಮಾಡದಿರುವುದು ನಿರಾಸೆಯನ್ನುಂಟು ಮಾಡಿದೆ. ಒಟ್ಟಿನಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದು ಅತೀವ ಸಂತೋಷವನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಬಾಂಡ್ಯ ಕೃಷ್ಟ್ರಾಯ ಪೈಯವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದಕ್ಕೆ ಪತ್ನಿ, ಪುತ್ರರು ಹಾಗೂ ಅವರ ಕುಟುಂಬ ವರ್ಗದ ಸದಸ್ಯರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

 

Write A Comment