ಕನ್ನಡ ವಾರ್ತೆಗಳು

ಅದಿವಾಸಿಗಳಿಗೆ ಮೂಲ ಸೌಕರ್ಯ ನೀಡಲು ಸರ್ಕಾರ ಬದ್ಧವಾಗಿದೆ : ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ.

Pinterest LinkedIn Tumblr

 

canara_collage_photo_1

ಮಂಗಳೂರು,ಎ.03  : ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದ್ದರೂ ದೇಶದಲ್ಲಿ ಸಾಮಾಜಿಕ ಅಸಮತೋಲನ ಇನ್ನೂ ಕಡಿಮೆಯಾಗಿಲ್ಲ. ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯ ಪರಿಪೂರ್ಣವಾಗಿ ತಲುಪುತ್ತಿಲ್ಲ ಆದಿವಾಸಿಗಳನ್ನು ಅರಣ್ಯ ಪ್ರದೇಶದಿಂದ ಒತ್ತಾಯಪೂರ್ವಕವಾಗಿ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಅವರಿಗೆ ಮೂಲಸೌಕರ್ಯ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಇಲ್ಲಿನ ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಕರ್ನಾಟಕ ಅರಣ್ಯಮೂಲ ಆದಿವಾಸಿ ಒಕ್ಕೂಟ, ಸಮಗ್ರ ಗ್ರಾಮೀಣ ಆಶ್ರಮ ಉಡುಪಿ ಮತ್ತು ಮಂಗಳೂರಿನ ಕಲ್ಪ ಟ್ರಸ್ಟ್‌ ಸಹಯೋಗದಲ್ಲಿ ಕೆನರಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ಬುಡಕಟ್ಟು ಸಮುದಾಯದ ಅಸ್ತಿತ್ವ ಮತ್ತು ಅಭಿವೃದ್ಧಿ’ ಕುರಿತ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

canara_collage_photo_5 canara_collage_photo_2 canara_collage_photo_3 canara_collage_photo_4

ಅರಣ್ಯ ಹಕ್ಕು ಕಾಯ್ದೆ ಜಾರಿಯಾದ ಬಳಿಕ ಆದಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಅರಣ್ಯ ಪ್ರದೇಶದಲ್ಲಿ 10 ವರ್ಷಗಳಿಂದ ವಾಸವಿರುವ ಆದಿವಾಸಿಗಳಿಗೆ ಅವರು ಅನುಭೋಗಿಸುವ ಭೂಮಿಯ ಹಕ್ಕನ್ನು ಈ ಕಾಯ್ದೆಯ ಅನ್ವಯ ನೀಡಬಹುದಾಗಿದೆ. ಅದರಂತೆ ರಾಜ್ಯ ದಲ್ಲಿ ಶೇ 17ರಷ್ಟು ಆದಿವಾಸಿ ಕುಟುಂಬಗಳಿಗೆ ಭೂಮಿಯ ಹಕ್ಕು ನೀಡಲಾಗಿದೆ. ಆಂಧ್ರ ಪ್ರದೇಶದಲ್ಲಿ ಶೇ 80ರಷ್ಟು ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಮತ್ತೆ ಅರ್ಜಿಯನ್ನು ಪುನರ್‌ಪರಿಶೀಲನೆ ಮಾಡಲಾಗುವುದು. ಆದಿವಾಸಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ಬುಡಕಟ್ಟು ಜನರ ಅತಂತ್ರ ಪರಿಸ್ಥಿತಿಗೆ ಇಂದಿನ ರಾಜಕಾರಣವೇ ಪ್ರಮುಖ ಕಾರಣ. ಅತ್ತ ತಲೆ ತಲೆಮಾರಿನಿಂದ ಬಂದ ಮೂಲ ಸಂಸ್ಕೃತಿಯನ್ನು ಬಿಡಲಾಗದೆ, ಇತ್ತ ಸಮಾಜದ ಮುಖ್ಯವಾಹಿನಿಗೂ ಬರಲಾಗದೆ ಆದಿವಾಸಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದರು.

ಮಂಗಳೂರು ವಿವಿಯ ಕುಲಸಚಿವ ಡಾ.ಪಿ.ಎಸ್‌. ಯಡಪಡಿತ್ತಾಯ, ಕರ್ನಾಟಕ ಅರಣ್ಯ ಮೂಲ ಆದಿ ವಾಸಿ ಒಕ್ಕೂಟದ ಅಧ್ಯಕ್ಷ ಜೆ.ಕೆ.ರಾಮು, ಕೆನರಾ ಹೈಸ್ಕೂಲ್‌ ಅಸೋಸಿಯೇಷನ್‌ನ ಅಧ್ಯಕ್ಷ ಎಸ್‌.ಎಸ್‌.ಕಾಮತ್‌, ಕಾರ್ಯ ದರ್ಶಿ ರಂಗನಾಥ್‌ ಭಟ್‌, ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಮಾಲಿನಿ, ಸಂಯೋಜಕಿ ಕೆ.ಪ್ರಮೀಳಾ, ಗಿರಿಜನ ಮಹಿಳೆ ಲಕ್ಷ್ಮಮ್ಮ ಇದ್ದರು.

Write A Comment