ಕನ್ನಡ ವಾರ್ತೆಗಳು

ರಿತೇಶ್ ಕೊಲೆ ಪ್ರಕರಣ : ಐವರು ಆರೋಪಿಗಳ ಸೆರೆ

Pinterest LinkedIn Tumblr

Rethesh_Murder_acused

ಮಂಗಳೂರು: ಮಾಲೆಮಾರ್ ನೆಕ್ಕಿಲಗುಡ್ಡೆಯಲ್ಲಿ ಐದು ದಿನಗಳ ಹಿಂದೆ ನಡೆದ ರಿತೇಶ್ ಯಾನೆ ರಿತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ. ನೆಕ್ಕಿಲಗುಡ್ಡೆಯ ಪ್ರಭಾಕರ್ ಅಂಚನ್ ಯಾನೆ ಪ್ರಭಾ (36), ನಿಶಾಂತ್ ಯಾನೆ ನಿಶಾಂತ್ ಕಾವೂರು (30),ಉರ್ವದ ವಿನೋದ್‍ರಾಜ್ ಯಾನೆ ಬೋಟಿ (24), ಬೊಂದೇಲ್‍ನ ಶೈಲೇಶ್ ಶೆಟ್ಟಿ ಯಾನೆ ಶೈಲು (27) ಮತ್ತು ಮುಡಿಪುವಿನ ಭರತೇಶ್ ಬಂಧಿತ ಆರೋಪಿಗಳು.

ಮಾ.29ರಂದು ರಾತ್ರಿ 12:30ರ ಸುಮಾರಿಗೆ ನೆಕ್ಕಿಲಗುಡ್ಡೆಯಲ್ಲಿ ಸತ್ಯನಾರಾಯಣ ಪೂಜೆಯ ಪ್ರಯುಕ್ತ ನಡೆದ ನಾಟಕ ವೀಕ್ಷಿಸಿ ಮನೆಗೆ ಹಿಂತಿರುಗುತ್ತಿದ್ದ ರಿತೇಶ್ ನನ್ನು ಮಾರಾಕಾಸ್ತ್ರಗಳಿಂದ ಕಡಿದು ಕೊಲೆ ಮಾಡಲಾಗಿತ್ತು.

ರಿತೇಶ್ ತಮ್ಮ ಸ್ನೇಹಿತರಾದ ರೋಹಿತ್, ಮಿಥುನ್ ಮತ್ತು ಯತೀಶ್ ಎಂಬವರೊಂದಿಗೆ ಬರುತ್ತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರಭಾ ಯಾನೆ ಪ್ರಭಾಕರ ಅಂಚನ್ ಹಾಗೂ ಇತರ ನಾಲ್ವರು ಸ್ನೇಹಿತರು ರಿತೇಶ್ ನನ್ನು ಹರಿತವಾದ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು ಎಂದು ಎಫ್‌ಐರ್ ದಾಖಲಾಗಿತ್ತು.

ಇದೊಂದು ಹಣಾಕಾಸು ವಿವಾದದಿಂದ ನಡೆದ ಹತ್ಯೆಯಾಗಿದ್ದು, ರಿತೇಶ್‌ಗೆ ಪ್ರಭಾಕರ್ ತಾನು ನೀಡಿದ್ದ ಸಾಲದ ಮೊತ್ತ ಹಿಂದಿರಗಿಸುವಂತೆ ಕೆಲವು ಸಮಯಗಳಿಂದ ಕೇಳುತ್ತಿದ್ದು. ರಿತೇಶ್ ಹಣ ವಾಪಸ್ಸು ನೀಡದೆ ಇದ್ದ ಕಾರಣ ಇವರ ನಡುವೆ ವೈಷಮ್ಯ ಬೆಳೆದಿತ್ತು. ಇದೇ ವಿಚಾರದಲ್ಲಿ ಮಾ.29ರಂದು ರಾತ್ರಿ ರಿತೇಶ್ ಮತ್ತು ಪ್ರಭಾಕರ ಅಂಚನ್‍ರವರಲ್ಲಿ ಮಾತಿಗೆ ಮಾತು ಬೆಳೆದು ರಿತೇಶ್ ಕೊಲೆಯಲ್ಲಿ ಇವರ ವಿವಾದ ಅಂತ್ಯ ಕಂಡಿದೆ.

ಹತ್ಯೆ ನಡೆದ ಬಳಿಕ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆ ಆರೋಪಿ:

Rithesh_Murder_Case1

ರಿತೇಶ್ 2012ರ ಡಿ.21ರಂದು ನಡೆದಿದ್ದ ಜೆಡಿಎಸ್ ಮುಖಂಡ ಗಿರೀಶ್ ಪುತ್ರನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ. ನಗರದ ಹಲವಾರು ಯುವಕ – ಯುವತಿಯರನ್ನು ಬಳಸಿಕೊಂಡು ಪ್ರೇಮದ ನಾಟಕವಾಡಿ ಹಣ ದೋಚುತ್ತಿದ್ದ ಕೋಡಿಕಲ್ ನ ನತಾಶ ಎಂಬಾಕೆ ಜೊತೆ ಗಿರೀಶ್ ಪುತ್ರನ್‌ಗೆ ಸಂಬಂಧವಿರುವುದನ್ನು ತಿಳಿದ ಆಕೆಯ ಪ್ರೇಮಿ ರಾಜೇಶ್ ಹಾಗೂ ನತಾಶಳ ಇನ್ನೋರ್ವ ಸ್ನೇಹಿತ ಬೋಳೂರಿನ ಪ್ರಶಾಂತ್ ಎಂಬವರು ಸೇರಿ ರಿತೇಶ್ ಮೂಲಕ ಗಿರೀಶ್ ಪುತ್ರನ್‌ನ್ನು ಕೊಲ್ಲಿಸಿದ್ದರು.

ಕೊಲೆ ಬಳಿಕ ಈತ ಮುಂಬಯಿ, ದುಬೈ ಸೇರಿದಂತೆ ಕೆಲವೆಡೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. 2013 ಮಾರ್ಚ್ ಅಂತ್ಯದಲ್ಲಿ ಈತ ಊರಿಗೆ ಬಂದಿದ್ದ ಮಾಹಿತಿ ಪಡೆದ ಅಂದಿನ ಬಜಪೆ ಇನ್‌ಸ್ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದ ಪೊಲೀಸರ ತಂಡ ರಿತೇಶ್‌ನನ್ನು ಕೂಳೂರು ಸಮೀಪ ಬಂಧಿಸಿ ಜೈಲಿಗಟ್ಟಿದ್ದರು. ಸುಮಾರು ಒಂದು ವರ್ಷ ಜೈಲಿನಲ್ಲಿದ್ದ ರಿತೇಶ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆ ಬಳಿಕ ನೆಕ್ಕಿಲಗುಡ್ಡೆಯಲ್ಲಿ ನೆಲೆಸಿದ್ದ.

Write A Comment