ಮಂಗಳೂರು,ಎ.03 : ಕ್ರೈಸ್ತ ಸಮುದಾಯದ ಅತೀ ಪವಿತ್ರ ಹಬ್ಬ ಈಸ್ಟರ್‌ನ ಮೂರು ದಿನಗಳ ಧಾರ್ಮಿಕ ವಿಧಿವಿಧಾನಗಳು ಗುರುವಾರ ನಗರದ ರೋಸರಿಯೋ ಚರ್ಚ್‌ನಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು. ಕ್ರೈಸ್ತ ಭಾಂಧವರು ಏಸುವಿನ ಕೊನೆಯ ಭೋಜನ ಹಾಗೂ ಧರ್ಮ ಸಭೆಯ ಉಗಮದ ದಿನದ ಆಚರಣೆಯನ್ನು ನಡೆಸಿದರು.
ಪವಿತ್ರ ಗುರುವಾರದಂದು ಯೇಸು ಕ್ರಿಸ್ತರು ತಾನು ಶಿಲುಬೆಗೇರುವ ಮುನ್ನ ತನ್ನ 12 ಮಂದಿ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಸವಿಯುವುದರೊಂದಿಗೆ ತನ್ನ ಅನುಯಾಯಿಗಳಿಗೆ ಸರಳತೆಯ ಪಾಠವನ್ನು ಬೋಧಿಸುವ ಸಲುವಾಗಿ ತನ್ನ ಶಿಷ್ಯರ ಪಾದಗಳನ್ನು ತೊಳೆದಿದ್ದರು. ಇದರ ನೆನಪಿಗಾಗಿ ಪವಿತ್ರ ಗುರುವಾರದಂದು ಪ್ರತೀ ಚರ್ಚುಗಳಲ್ಲಿ ಚರ್ಚಿನ ಧರ್ಮ ಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿಗಳ ಪಾದಗಳನ್ನು ತೊಳೆಯುತ್ತಾರೆ.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ಅಲೋಷಿಯಸ್ ಪೌಲ್ ಡಿ’ಸೋಜಾ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಧರ್ಮಾಧ್ಯಕ್ಷರು 12 ಮಂದಿ ಕ್ರೈಸ್ತ ವಿಶ್ವಾಸಿಗಳ ಪಾದಗಳನ್ನು ತೊಳೆದು ಪವಿತ್ರ ಬಲಿಪೂಜೆ ನೆರವೇರಿಸಿ ಸಂದೇಶವನ್ನು ನೀಡಿದರು.