ಕನ್ನಡ ವಾರ್ತೆಗಳು

ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ಪ್ರಾಣ ತೆತ್ತಾದರೂ ಹೋರಾಟ: ಸಿಐಟಿಯು ದ.ಕ.ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಉಮೇಶ್

Pinterest LinkedIn Tumblr

Citu_Distric_sammelana_1

ಮಂಗಳೂರು, ಎ.01: ಬೀದಿ ಬದಿ ವ್ಯಾಪಾರ ಕಾನೂನು ಬದ್ಧವಾಗಿದ್ದು, ಕಾನೂನನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಕಾನೂನು ಭಂಜಕರಾಗಿ ಕಾರ್ಯ ನಿರ್ವಹಿಸಿದರೆ ಪ್ರಾಣ ತೆತ್ತಾದರೂ ನಮ್ಮ ಹಕ್ಕನ್ನು ನಾವು ರಕ್ಷಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಫೆಡರೇಶನ್ (ಸಿಐಟಿಯು)ನ ರಾಜ್ಯಾಧ್ಯಕ್ಷ ಕೆ.ಎನ್ ಉಮೇಶ್ ಹೇಳಿದ್ದಾರೆ.

ಅವರು ಇಂದು ನಗರದ ಎನ್‌ಜಿಒ ಸಭಾಂಗಣದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿ, ಉಚಿತ ಮನೆ ನಿವೇಶನ, ಬಿಪಿಎಲ್ ಪಡಿತರ ಚೀಟಿ ನೀಡಲು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರ 3ನೆ ದ.ಕ.ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 Citu_Distric_sammelana_2 Citu_Distric_sammelana_3 Citu_Distric_sammelana_4

ಸಂಸತ್ತಿನಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೊಂಡ ಕಾನೂನಿನ ಪ್ರಕಾರ ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವಂತಿಲ್ಲ. ಯಾವುದೇ ಕ್ರಮ ಕೈಗೊಳ್ಳುವುದಾದರೂ ನಗರದ ಪ್ರದೇಶದಲ್ಲಿ ರಚನೆಯಾದ ಬೀದಿ ಬದಿ ವ್ಯಾಪಾರಿಗಳ, ಮಾರಾಟಗಾರರ ಸಮಿತಿಯಲ್ಲಿ ಚರ್ಚಿಸಿಯೇ ಮನಪಾ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ ಮನಪಾ ವ್ಯಾಪ್ತಿಯಲ್ಲಿ ಅಂತಹ ಯಾವುದೇ ಚರ್ಚೆ ನಡೆಯದೆ ಏಕಾಏಕಿಯಾಗಿ ಬೀದಿ ಬದಿ ವ್ಯಾಪಾರಿ ಗಳನ್ನು ಸದೆಬಡಿಯುವ ಕಾರ್ಯ ನಡೆಯುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಈ ಹಿಂದೆ ಮನಪಾದಲ್ಲಿ ಬಿಜೆಪಿ ಆಡಳಿತದ ಸಮಯದಲ್ಲಿ ಟೈಗರ್ ಕಾರ್ಯಾಚರಣೆಯ ಮೂಲಕ ಬೀದಿಬದಿ ವ್ಯಾಪಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ನಡೆದಿದ್ದರೆ ಇದೀಗ ಕಾಂಗ್ರೆಸ್ ಆಡಳಿತದಿಂದಲೂ ಬೀದಿ ಬದಿ ವ್ಯಾಪಾರಸ್ಥರ ಮೇಲಿನ ಪ್ರಹಾರ ಮುಂದುವರಿದಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕಾನೂನು ಕಸಿಯಲು ಬಿಡುವುದಿಲ್ಲ ಎಂದು ಅವರು ಹೇಳಿದರು.

Citu_Distric_sammelana_5 Citu_Distric_sammelana_6

ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನೂ ಗುರುತಿನ ಚೀಟಿ ನೀಡಿಲ್ಲ. ಪ್ರತ್ಯೇಕ ವ್ಯಾಪಾರ ವಲಯ ರಚನೆ ಮಾಡುವ ನಿಟ್ಟಿನಲ್ಲಿ ಸಭೆ ನಡೆದು ಒಮ್ಮತದ ಜಾಗ ನಿಗದಿ ಪಡಿಸಲಾಗಿದ್ದರೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಹಾಗಿದ್ದರೂ ಅಧಿಕಾರಿಗಳು ಪೊಲೀಸರ ಮೂಲಕ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ನೆಪದಲ್ಲಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ. ಹಸನ್, ಮುಹಮ್ಮದ್ ಮುಸ್ತಫಾ, ಮುಹಮ್ಮದ್ ಆಸಿಫ್, ಬಿ.ಎ.ಹಸನ್, ಅಣ್ಣಯ್ಯ ಕುಲಾಲ್, ಖಾದರ್ ಲೇಡಿಗೋಶನ್, ಶೋಭಾ, ಹಸನ್ ಮಾಡೂರು, ಸೆಲ್ವರಾಜ್, ಮಾಲಿ, ಮೇರಿ ಡಿಸೋಜ, ನಟರಾಜ್, ಅತಾವುಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Write A Comment