ಮಂಗಳೂರು, ಎ.01: ಮಧ್ಯಪ್ರಾಚ್ಯದ ಯಮನ್‌ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ರಾತ್ರಿ ಹೊತ್ತಿನಲ್ಲಿ ನಡೆಯುತ್ತಿದ್ದ ವೈಮಾನಿಕ ದಾಳಿ ಇದೀಗ ಹಗಲು ಹೊತ್ತಿಗೆ ವಿಸ್ತರಿಸಿದೆ ಎನ್ನಲಾಗುತ್ತಿದೆ. ಯಮನ್‌ನಲ್ಲಿರುವ ಸಾವಿರಾರು ಭಾರತೀಯರು ಇದೀಗ ತಾಯ್ನಿಡಿಗೆ ಹಿಂದಿರುಗಲು ಕಾತರದಿಂದಿದ್ದು, ಇವರ ಪೈಕಿ ದ.ಕ. ಜಿಲ್ಲೆಯ ಪುತ್ತೂರಿನ ಕೋಡಿಂಬಾಳ ಕಡಬ ನಿವಾಸಿ ರಾಜೇಶ್ ಜಿ. ಎಂಬ 24ರ ಹರೆಯದ ಯುವಕ ಕೂಡಾ ಸೇರಿದ್ದಾನೆ.
ವೃತ್ತಿಯಲ್ಲಿ ಏರ್ ಕಂಡಿಶನರ್ ಎಂಜಿನಿಯರ್ ಆಗಿರುವ ರಾಜೇಶ್ ಜಿ. ಯೆಮನ್‌ನ ರಾಜಧಾನಿ ಸನಾದಲ್ಲಿ ಮಾಮ್ ಇಂಟರ್‌ನ್ಯಾಷನಲ್ ಕಂಪೆನಿಯ ಉದ್ಯೋಗಿ. ಕೃಷಿಕ ಚೆನ್ನಪ್ಪ ಗೌಡ ಮತ್ತು ರತ್ನಾವತಿ ದಂಪತಿಯ ಐವರು ಮಕ್ಕಳಲ್ಲಿ ಕಿರಿಯವರಾದ ರಾಜೇಶ್ 2 ವರ್ಷಗಳಿಂದ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ತಿಂಗಳ ಹಿಂದೆಯಷ್ಟೆ ತಾಯ್ನೆಡಿಗೆ ಆಗಮಿಸಿ ಮತ್ತೆ ಮಾರ್ಚ್‌ನಲ್ಲಿ ತಮ್ಮ ಕರ್ತವ್ಯಕ್ಕೆ ಅವರು ಸನಾಕ್ಕೆ ತೆರಳಿದ್ದಾರೆ. ಇದೀಗ ತಮ್ಮ ಮಗ ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಈ ಹಿರಿಯ ದಂಪತಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.
‘ಕಳೆದ ಹಲವು ದಿನಗಳಿಂದ ಯಮನ್‌ನಲ್ಲಿ ನಡೆಯುತ್ತಿರುವ ಘಟನೆಯಿಂದ ರಾಜೇಶ್ ಆತಂಕಿತರಾಗಿದ್ದಾರೆ. ಇತರ ಅನಿವಾಸಿ ಭಾರತೀಯರಂತೆ ರಾಜೇಶ್ ಕೂಡಾ ತಾಯ್ನಾಡಿಗೆ ಹಿಂದಿರುಗಲು ಅಲ್ಲಿನ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಲ್ಲಿಂದ ಕಳುಹಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರಕಿಲ್ಲ.ಗಲಭೆ ಪೀಡಿತ ಸನಾದಲ್ಲಿ ಸಿಲುಕಿಕೊಂಡವರಲ್ಲಿ ಮೂವರು ಕನ್ನಡಿಗರಿದ್ದಾರೆ ಎಂದು ಇಂದು ಮುಂಜಾನೆ ದೂರವಾಣಿ ಮೂಲಕ ಸಂಪರ್ಕಿಸಿದ್ದ ರಾಜೇಶ್ ತಿಳಿಸಿದ್ದಾರೆ’ ಎಂದು ಅವರ ಸಂಬಂಧಿ ಪುತ್ತೂರಿನ ರಾಧಾಕೃಷ್ಣ ನಂಬಿಲ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.
ಹಗಲು ಹೊತ್ತಿನಲ್ಲೂ ಭಯ…
‘ರಾಜೇಶ್ ಪ್ರಸ್ತುತ ಅಲ್ಲಿನ ರಾಯಭಾರ ಕಚೇರಿಯಿಂದ 2 ಕಿ.ಮೀ. ದೂರದ ತಮ್ಮ ಕೋಣೆಯಲ್ಲಿದ್ದಾರೆ. ಹಗಲು ಹೊತ್ತಿನಲ್ಲೂ ಕೋಣೆಯಿಂದ ಹೊರಬರಲು ತೀರಾ ಭಯ ವಾತಾವರಣ ಸೃಷ್ಟಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ರಾತ್ರಿ ಹೊತ್ತು ಜೋರಾಗಿ ಸಿಡಿಯುವ ಸದ್ದುಗಳು ಕೇಳಿಸುತ್ತಿದ್ದರೆ ಇದೀಗ ಹಗಲು ಹೊತ್ತಿನಲ್ಲೇ ಕೇಳಿಸುತ್ತಿವೆೆ. ಭಯದಲ್ಲೇ ದಿನದೂಡಬೇಕಾಗಿದೆ. ಅಲ್ಲಿಂದ ಒಮ್ಮೆ ವಾಪಸ್ ಬಂದರೆ ಸಾಕು ಎಂಬ ಆತಂಕವನ್ನು ತೋಡಿಕೊಂಡಿದ್ದಾರೆ’ ಎಂದು ಅವರ ಸಂಬಂಧಿ ರಾಧಾಕೃಷ್ಣ ತಿಳಿಸಿದ್ದಾರೆ.