ಕನ್ನಡ ವಾರ್ತೆಗಳು

ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ದರೋಡೆಕೋರರ ಸೆರೆ

Pinterest LinkedIn Tumblr

robbery_arest_photo

ಸುರತ್ಕಲ್ ,ಮಾರ್ಚ್.27: ಯುವಕನೊಬ್ಬನ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ನಗದು ಮತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಗೈದು ತಲೆ ಮರೆಸಿಕೊಂಡಿದ್ದ ಮತ್ತಿ ಬ್ಬರು ಆರೋಪಿಗಳನ್ನು ಬಂಧಿಸಿರುವ ಸುರತ್ಕಲ್ ಪೊಲೀಸರು, ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.

ಮಾರ್ಚ್ 18 ರಂದು ಈ ಪ್ರಕರಣದ ಪ್ರಮುಖ ನಾಲ್ಕು ಮಂದಿ ಪೊಲೀಸರ ಸೆರೆಯಾಗಿದ್ದರೆ ಘಟನೆಯ ಸೂತ್ರಧಾರಿಗಳು ಎನ್ನಲಾದ ಗುರುಪುರ ಕೈಕಂಬದ ಕಂದಾವರ ನಿವಾಸಿ ಮನೋಜ್ ಮತ್ತು ಜಪಾನ್ ಮಂಕಿ ಎಂಬಿಬ್ಬರು ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದು ಇಬ್ಬರನ್ನೂ  ರಾತ್ರಿ ಬಂಧಿಸಿದ್ದಾರಾದರೂ ಗುರುವಾರ ಮುಂಜಾನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಡಿಸೆಂಬರ್ 23 ರಂದು ಚೊಕ್ಕಬೆಟ್ಟು ಕೆ.ಎಸ್. ಸುಪರ್ ಬಜಾರ್ ಮಾಲಕ ನಹಿಂ ಎಂಬವರು ತಮ್ಮ ಸಂಬಂಧಿಕರಿಗೆ ನೀಡಲೆಂದು ಒಂದೂವರೆ ಲಕ್ಷ ನಗದು ಮತ್ತು 200 ಗ್ರಾಂ ಚಿನ್ನಾಭರಣವನ್ನು ಸಂಬಂಧಿಕರಾದ ಶರೀಮ್ ಎಂಬವರಲ್ಲಿ ನೀಡಿ ಕಳುಹಿಸಿದ್ದರು. ಶರೀಮ್ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಚೊಕ್ಕಬೆಟ್ಟು ಬಳಿ ಅವರನ್ನು ತಡೆದು ನಿಲ್ಲಿಸಿದ ಆರೋಪಿಗಳು ತಲವಾರಿನಿಂದ ಹಲ್ಲೆ ನಡೆಸಿ ನಗ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡೆಕೊಪ್ಲ ನಿವಾಸಿ ನಝೀಮ್ ಅಫಿದ್ (25), ದೇರಳಕಟ್ಟೆ ನಿವಾಸಿ ಶಬೀರ್ (28), ಸುರತ್ಕಲ್ ಜನತಾಕಾಲೋನಿ ನಿವಾಸಿ ಮೊಹಮ್ಮದ್ ಆಸೀಫ್ (24), ಮಂಜನಾಡಿ ನಿವಾಸಿ ಶಮೀರ್ ಹಂಝ (30) ಎಂಬವರನ್ನು ಪೊಲೀಸರು ಮಾರ್ಚ್ 18 ರಂದು ಬಂಧಿಸಿದ್ದರು.ಇದೀಗ ಇನ್ನಿಬ್ಬರ ಬಂಧನ ವಾಗುವುದರ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ. ಆರೋಪಿಗಳಿಂದ ಐದು ಲಕ್ಷ ಮೌಲ್ಯದ 192 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವಾರ ಮನೋಜ್ ಅರೆಸ್ಟ್ ಆದ ವದಂತಿ ವಾಟ್ಸಾಪ್‍ಗಳಲ್ಲಿ ಸಾಕಷ್ಟು ಹರಿದಾಡಿ ಸಾಕಷ್ಟು ಸುದ್ದಿಯಾಗಿತ್ತು. ಈತನ ಇಮೇಜ್ ಸೃಷ್ಟಿಸಿ ವಾಟ್ಸಾಪ್‍ಗಳಲ್ಲಿ ಹರಿಯಬಿಡಲಾಗಿತ್ತು.
ಮನೋಜ್‍ನನ್ನು ಪಡೀಲ್‍ನ ಮಾರ್ನಿಂಗ್ ಮಿಸ್ಟ್ ಹೋಂನಲ್ಲಿ ನಡೆದಿದ್ದ ಹೋಂಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿಯೂ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.

Write A Comment