ಮಂಗಳೂರು,ಮಾರ್ಚ್.27: ಭಾರತದ ಇತಿಹಾಸ ಬಹಳ ರೋಚಕ ಹಾಗೂ ಅಭೂತಪೂರ್ವ. ಅದರಲ್ಲೂ ಮಧ್ಯಯುಗದಲ್ಲಿ ಕಂಡು ಬರುವ ಅಗಾಧವಾದ ಬೌದ್ಧಿಕ ಉತ್ಸಾಹ ಮತ್ತು ಸೃಜನಶೀಲ ಉತ್ಪಾದನೆಗಳನ್ನು ಚರ್ಚೆಯಿಂದ ದೂರ ಉಳಿಸಲಾಗಿದೆ. ಅದು ಸಲ್ಲದು. ಬೌತಿಕ ಇತಿಹಾಸವನ್ನು ಉತ್ಪ್ರೇಕ್ಷೆ ಮಾಡದೆ ಇತಿಹಾಸದ ಕುರಿತಾಗಿ ಚಿಂತನೆ, ಅಧ್ಯಯನ ನಡೆದರೆ ಮಾತ್ರ ಸತ್ಯವನ್ನು ಇಂದಿನ ಹಾಗೆಯೇ ಮುಂದಿನ ತಲೆಮಾರಿಗೆ ನೀಡಲು ಸಾಧ್ಯ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪುತ್ರಿ, ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ಉಪಿಂದರ್ ಸಿಂಗ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಮಂಗಳಾ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕರ್ನಾಟಕ ಇತಿಹಾಸ ಕಾಂಗ್ರೆಸ್ನ 24ನೇ ಅಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಾತತ್ವ ಶಾಸ್ತ್ರದಲ್ಲಿ ಭಾರತದ ಇತಿಹಾಸವನ್ನು ತಿಳಿಯಲು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಳ್ಳುವುದು ಉತ್ತಮ. ತತ್ವಶಾಸ್ತ್ರದ ಮಾಹಿತಿಗಳು, ಧಾರ್ಮಿಕ ವಿಚಾರಗಳು, ರಾಜಕೀಯ ಚಿಂತನೆ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸ ಹಾಗೆಯೇ ವಿಶ್ವದ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ವಿಚಾರಗಳನ್ನು ಗುರುತಿಸುವಂತಹ ಕೆಲಸ ಇಂದಿನ ಯುವ ಇತಿಹಾಸಕಾರದಿಂದ ಆಗಬೇಕಿದೆ ಎಂದು ನುಡಿದರು.
ಭಾರತದ ಇತಿಹಾಸ ಪ್ರಪಂಚದಲ್ಲೇ ಭಿನ್ನವಾದುದು. ಇತಿಹಾಸ ಕೆದಕಿದಷ್ಟು ಹೊರಬರುತ್ತದೆ. ದೆಶದ ವಿವಿಧ ಭಾಗಗಳಲ್ಲಿರುವ ಶಿಲಾಶಾಸನವನ್ನು ಶೋಸಿ ಅಧ್ಯಯನ ಮಾಡಲು ಜ್ಞಾನ ಕೌಶಲ್ಯ ಹಾಗೂ ನೈಪುಣ್ಯತೆ ಇರುವ ಯುವ ಇತಿಹಾಸ ತಜ್ಞರ ಅಗತ್ಯತೆ ಎದ್ದು ಕಾಣುತ್ತಿದೆ ಎಂದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ರಾಮನಾಥನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ಬಿ.ಎನ್.ನಾಯ್ಡು, ಮಂಗಳೂರು ವಿ.ವಿ.ಕುಲಪತಿ ಪ್ರೊ. ಕೆ.ಭೈರಪ್ಪ, ಕರ್ನಾಟಕ ಇತಿಹಾಸ ಕಾಂಗ್ರೆಸ್ನ ಅಧ್ಯಕ್ಷ ಪ್ರೊ. ರಾಜಣ್ಣ ಉಪಸ್ಥಿತರಿದ್ದರು. ಮಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಲೋಕೇಶ್ ಸ್ವಾಗತಿಸಿದರು.


