ಮಂಗಳೂರು,ಮಾರ್ಚ್.27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳ ಸುಧಾರಣೆಯಾಗಿದ್ದು,ಇದರ ಫಲ 2014-15 ನೇ ಸಾಲಿನಲ್ಲಿ (ಫೆಬ್ರವರಿ ಅಂತ್ಯದವರೆಗೆ) ವಿವಿಧ ಕಾರಣಗಳಿಂದ 240 ಶಿಶುಗಳು ಹಾಗೂ ಪ್ರಸವ ನಂತರ ವಿವಿಧ ಕಾರಣಗಳಿಗೆ ಇಬ್ಬರು ತಾಯಂದಿರು ಮರಣವನ್ನಪ್ಪಿದ್ದಾರೆ,ಈ ಪ್ರಮಾಣ ಇನ್ನು ಕಡಿಮೆಯಾಗಿ ಶೂನ್ಯಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ಅವರು ಬುಧವಾರದಂದು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಫೆಬ್ರವರಿ 2015 ರ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡಿಮೆ ತೂಕದ ಜನನ,ಅವಧಿ ಪೂರ್ವ ಹೆರಿಗೆ,ಅತಿಸಾರ, ನ್ಯೂಮೇನಿಯಾ,ದಡಾರ, ಕ್ಷಯ ಮುಂತಾದ ಕಾರಣಗಳಿಂದ ಬಂಟ್ವಾಳದಲ್ಲಿ 35, ಬೆಳ್ತಂಗಡಿಯಲ್ಲಿ 35, ಪುತ್ತೂರಿನಲ್ಲಿ 51, ಸುಳ್ಯ 27 ಮತ್ತು ಮಂಗಳೂರಿಲ್ಲಿ 92 ಶಿಶುಗಳು ಮರಣಿಸಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣ ಶೇಕಡಾ 10.2 ಆಗಿದೆ. ಇವರಲ್ಲಿ 0-7 ದಿನಗಳೊಳಗಿನ 91, 8-28 ದಿನಗಳ 39 ಮತ್ತು 29 ದಿನಗಳಿಂದ 1 ವರ್ಷ ಪ್ರಾಯದೊಳಗಿನ 110 ಶಿಶುಗಳು ಸಾವನಪ್ಪಿದ್ದಾರೆ. ಇದೇ ಅವಧಿಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 23753 ಹೆರಿಗೆಗಳು ಆಗಿರುತ್ತವೆಯೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿಯಿತ್ತರು.
ತುರ್ತು ಆರೋಗ್ಯ ಸೇವೆಗಳಿಗೆ ಮೀಸಲಿಟ್ಟಿರುವ 108 ಅಂಬುಲೆನ್ಸ್‌ಗಳು ಜಿಲ್ಲೆಯಲ್ಲಿ 28 ಕಾರ್ಯಾಚರಿಸುತ್ತಿದ್ದು, 2015ರ ಜನವರಿಯಲ್ಲಿ 1698 ತುರ್ತು ಸೇವೆಗಳ ಕರೆಗಳಿಗೆ ಸ್ಪಂದಿಸಿ ಸೇವೆ ಒದಗಿಸಿದೆ. ಒಟ್ಟು 1712 ಪ್ರಕರಣಗಳಿಗೆ 108 ಅಂಬುಲೆನ್ಸ್ ಸೇವೆ ಒದಗಿಸಲಾಗಿದ್ದು, ಇವುಗಳಲ್ಲಿ 311 ರಸ್ತೆ ಅಪಘಾತಗಳು, 252 ಗರ್ಭಿಣಿ ಸ್ತ್ರೀಯರ ಸಾಗಾಟ, 38 ಆತ್ಮಹತ್ಯೆ/ವಿಷಪ್ರಾಶನ ಪ್ರಕರಣಗಳು, 147 ಉಸಿರಾಟ ತೊಂದರೆಗಳಿಗೆ.158 ಹೃದಯಾಘಾತ ಪ್ರಕರಣಗಳು, ಹೊಟ್ಟೆಗೆ ಸಂಬಂಧಿಸಿದ ತೊಂದರೆಯ 239 ಹಾಗೂ ಇತರೆ 552 ಪ್ರಕರಣಗಳಿಗೆ ಅಂಬುಲೆನ್ಸ್ ಸೇವೆ ಒದಗಿಸಲಾಗಿದೆಯೆಂದು 108 ಸಂಸ್ಥೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ, ಆರ್.ಸಿ.ಎಚ್. ಅಧಿಕಾರಿ ಡಾ.ರುಕ್ಮಿಣಿ, ಡಾ.ಅರುಣ್ ಕುಮಾರ್, ವೆನ್‌ಲಾಕ್ ಅಧೀಕ್ಷಕೆ ಡಾ. ರಾಜೇಶ್ವರಿ ದೇವಿ ಮುಂತಾದವರು ಉಪಸ್ಥಿತರಿದ್ದರು.