ಮಂಗಳೂರು, ಮಾ.26 : ಪುತ್ತೂರಿನ ಪಾಣಾಜೆಯಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರದಲ್ಲಿ ಭಾಗವಹಿಸಿ ನಗರದ ಒಮೇಗಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸಾವಿಗೀಡಾದ ಹಾಗೂ ರೋಗಿಯೊಬ್ಬರ ಸ್ಥಿತಿ ಗಂಭೀರವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ವರದಿ ಬರುವವರೆಗೆ ದ.ಕ. ಜಿಲ್ಲೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.
ರೋಗಿಗಳ ಸಾವು ಹಾಗೂ ಗಂಭೀರ ಸ್ಥಿತಿಯ ಕುರಿತಂತೆ ನಿನ್ನೆ ಪಾಣಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಆಕ್ರೋಶಗೊಂಡ ಸಾರ್ವಜನಿಕರನ್ನು ಸಮಾಧಾನಗೊಳಿಸಲು ತೆರಳಿದ್ದ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಯವರ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ಘಟನೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಸರಕಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ ಸಂದರ್ಭ ಅವರು ಈ ಸೂಚನೆ ನೀಡಿದರು. ನಿನ್ನೆ ನಡೆದ ಪ್ರಕರಣದ ಕುರಿತಂತೆ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳು, ಅದರಿಂದ ಪ್ರಯೋಜನ ಪಡೆದವರ ಮಾಹಿತಿ, ಯೋಜನೆ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು. ‘
‘ಸರಕಾರದ ಯೋಜನೆಗಳು ಖಾಸಗಿ ಆಸ್ಪತ್ರೆಗಳಿಗೆ ಕೇವಲ ದುಡ್ಡು ಮಾಡುವ ಮಾರ್ಗವಾಗಿರಬಾರದು. ಆಸ್ಪತ್ರೆಯಿಂದ ಬಿಡುಗಡೆ ಆದ ಬಳಿಕವು ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯುವಂತಿರಬೇಕು ಹಾಗೂ ಸೂಕ್ತ ಮಾರ್ಗದರ್ಶನವನ್ನೂ ಒದಗಿಸುವಂತಿರಬೇಕು. ನಿನ್ನೆಯ ಘಟನೆಯಲ್ಲಿ ಸಾರ್ವಜನಿಕರ ನೋವು, ವ್ಯವಸ್ಥೆಯ ಬಗ್ಗೆ ಅಸಹನೆ ವ್ಯಕ್ತವಾಗಿರುವುದು. ಆ ಬಗ್ಗೆ ಸೂಕ್ತ ಸ್ಪಂದನೆ ಸರಕಾರಿ ಆರೋಗ್ಯ ಇಲಾಖೆಯ ಕರ್ತವ್ಯವೂ ಆಗಿರುತ್ತದೆ’’ ಎಂದು ಸರಕಾರಿ ವೈದ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಪ್ರಕರಣದ ಕುರಿತಂತೆ ಮರಣೋತ್ತರ ಪರೀಕ್ಷಾ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ವೈದ್ಯಾಧಿಕಾರಿಗೆ ಸೂಚಿಸಿದರು. ರೋಗಿಗಳ ಸಾವು ಹಾಗೂ ಇತರ ಸಮಸ್ಯೆಗಳ ಕುರಿತಂತೆ ಪುತ್ತೂರು ಮತ್ತು ಮಂಗಳೂರು ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಲ್ಲದೆ ಖಾಸಗಿ ವೈದ್ಯರನ್ನೊಳಗೊಂಡು ಸೂಕ್ತ ತನಿಖೆ ನಡೆಸುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್ ಭರವಸೆ ನೀಡಿದರು. ‘‘ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಆಸ್ಪತ್ರೆಯವರು ರೋಗಿಯ ಆರೋಗ್ಯ ವಿಚಾರಣೆ ನಡೆಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಒಮೇಗಾ ಆಸ್ಪತ್ರೆಯಿಂದಲೂ ವರದಿಯನ್ನು ಪಡೆಯಲಾಗುವುದು’’ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ಉಪಸ್ಥಿತರಿದ್ದ ಪತ್ರಕರ್ತರಿಗೆ ತಿಳಿಸಿದರು.
‘‘ಸಾರ್ವಜನಿಕರ ಆರೋಪದಂತೆ ಒಮೇಗಾ ಆಸ್ಪತ್ರೆಯಲ್ಲಿ ನಡೆಸಲಾದ ಶಸ್ತ್ರ ಚಿಕಿತ್ಸೆಯಲ್ಲಿನ ಲೋಪದಿಂದಾಗಿ ಇಬ್ಬರ ಸಾವು ಸಂಭವಿಸಿದೆಯೇ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಾರ್ವಜನಿಕರನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ನಾನು ಮಂಗಳೂರಿನಿಂದ ತಕ್ಷಣ ಪುತ್ತೂರಿಗೆ ತೆರಳಿದ್ದೆ. ಆ ಸಂದರ್ಭ ಹಲ್ಲೆ ಯತ್ನ ನಡೆದಿದೆ. ರೋಗಿಗಳ ಸಾವಿನ ಕುರಿತು, ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿರುವ ಸುವರ್ಣ ಆರೋಗ್ಯ ಟ್ರಸ್ಟ್‌ನ ಉಪ ನಿರ್ದೇಶಕರ ಗಮನಕ್ಕೆ ತರಲಾಗಿದೆ’’ ಎಂದು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಘಟನೆಯ ಬಗ್ಗೆ ವಿವರ ನೀಡಿದ್ದಾರೆ.
ಕಪ್ಪು ಪಟ್ಟಿ ಧರಿಸಿ ಎರಡು ದಿನ ಪ್ರತಿಭಟನೆ:
ವಾಜಪೇಯಿ ಆರೋಗ್ಯಶ್ರೀ ಯೋಜನೆ ಸರಕಾರಿ ಯೋಜನೆಯಾಗಿ ದ್ದರೂ ಅದನ್ನು ನಿರ್ವಹಿಸುವುದು ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ಖಾಸಗಿ ಆಸ್ಪತ್ರೆಯವರು. ಯೋಜನೆಗೆ ಫಲಾನುಭವಿಗಳ ಆಯ್ಕೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳಾವಕಾಶವನ್ನು ಮಾತ್ರ ನೀಡಲಾಗಿತ್ತು. ಹಾಗಿದ್ದರೂ ಪಾಣಾಜೆಯಲ್ಲಿ ನಿನ್ನೆ ಸಂಜೆ ಆಕ್ರೋಶಿತ ಜನರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತ ಮಹಿಳೆಯ ಶವವಿರಿಸಿ ಪ್ರತಿಭಟನೆ ನಡೆಸಿದ ಸಂದರ್ಭ ಸಮಸ್ಯೆ ಬಗ್ಗೆ ಚರ್ಚಿಸಲು ತೆರಳಿದ ಜಿಲ್ಲಾ ವೈದ್ಯಾಧಿಕಾರಿ ಮೇಲೆ ಹಲ್ಲೆಯತ್ನ ನಡೆದಿದೆ. ಸ್ಥಳೀಯ ತಾಲೂಕು ಆರೋಗ್ಯಾಧಿಕಾರಿಗಳೂ ಆತಂಕಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ನೀಡುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅಭದ್ರತೆಯನ್ನು ಎದುರಿಸಬೇಕಾಗಿದೆ. ಆರೋಗ್ಯ ಸೇವೆ ಸಲ್ಲಿಸುವ ಸರಕಾರಿ ವೈದ್ಯರು ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯ ಘಟನೆಯನ್ನು ಖಂಡಿಸಿ ಇಂದು ಮತ್ತು ನಾಳೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯರ ಸಂಘದ ದ.ಕ. ಜಿಲ್ಲಾ ಅಧ್ಯಕ್ಷ ಡಾ. ರಾಜೇಶ್ ಹೇಳಿದರು.