ಮಂಗಳೂರು, ಮಾರ್ಚ್.26 : ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ)ಯಡಿ ದ.ಕ. ಜಿಲ್ಲೆಯಲ್ಲಿ ತೆರೆಯಲಾದ ಶೇ.70ರಷ್ಟು ಖಾತೆಗಳು ಶೂನ್ಯ ಠೇವಣಿಯನ್ನು ಹೊಂದಿವೆ ಎಂದು ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್‌ನ ಎಜಿಎಂ ನಾರಾಯಣ್ ಹೇಳಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ಬುಧವಾರ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ನಡೆದ ದ.ಕ. ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಜನಧನ್ ಯೋಜನೆಯಡಿ ಖಾತೆಗಳನ್ನು ತೆರೆಯುವಲ್ಲಿ ಬ್ಯಾಂಕ್‌ಗಳು ಸಫಲವಾಗಿದ್ದರೂ ಬ್ಯಾಂಕಿಂಗ್ ಬಗ್ಗೆ ಜನರನ್ನು ಆಕರ್ಷಿಸುವಲ್ಲಿ ಸಾಕಷ್ಟು ಪೂರಕವಾದ ಕಾರ್ಯ ನಡೆದಿಲ್ಲ. ಹಾಗಾಗಿ ಶೇ. 70ರಷ್ಟು ಖಾತೆಗಳಿನ್ನೂ ಶೂನ್ಯ ಮೊತ್ತದಿಂದ ಕೂಡಿವೆ. ಮುಂದಿನ ಕೆಲ ತಿಂಗಳಲ್ಲಿ ಶೂನ್ಯ ಮೊತ್ತದ ಖಾತೆಗಳ ಸಂಖ್ಯೆಯನ್ನು ಕನಿಷ್ಠ ಶೇ. 30ಕ್ಕೆ ಇಳಿಸುವ ಜವಾಬ್ಧಾರಿ ಬ್ಯಾಂಕ್‌ಗಳದ್ದು ಎಂದು ಅವರು ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.
ದ.ಕ.: 48,000 ಕೋಟಿ ರೂ.ಗಳಿಗೂ ದಾಟಿದ ಬ್ಯಾಂಕಿಂಗ್ ವ್ಯವಹಾರ ದ.ಕ. ಜಿಲ್ಲೆಯಲ್ಲಿ 2014ರ ಡಿಸೆಂಬರ್ ಅಂತ್ಯಕ್ಕೆ 591 ಬ್ಯಾಂಕ್ ಖಾತೆಗಳ ಮೂಲಕ ಬ್ಯಾಂಕಿಂಗ್ ವ್ಯವಹಾರವು 48,000 ಕೋಟಿ ರೂ.ಗಳನ್ನು ದಾಟಿದೆ ಎಂದು ಲೀಡ್ ಬ್ಯಾಂಕ್‌ನ ಎಲ್‌ಡಿಎಂ ಪ್ರಭು ಅಲಗವಾಡಿ ಮಾಹಿತಿ ನೀಡಿದರು. ಈ ಅವಧಿಗೆ 30,729.83 ಕೋಟಿ ರೂ. ಠೇವಣಿ ಹಾಗೂ 17,288.29 ಕೋಟಿ ರೂ.ಗಳ ಮುಂಗಡದೊಂದಿಗೆ ಒಟ್ಟು 48,018.12 ಕೋಟಿ ರೂ.ಗಳ ಬ್ಯಾಂಕಿಂಗ್ ವ್ಯವಹಾರ ದಾಖಲಾಗಿದೆ ಎಂದು ಅವರು ಹೇಳಿದರು. 2013ರ ಡಿಸೆಂಬರ್ 31ಕ್ಕೆ ಶೇ. 50.75ರಷ್ಟಿದ್ದ ಬ್ಯಾಂಕ್‌ಗಳ ಕ್ರೆಡಿಟ್ ಠೇವಣಿ ಅನುಪಾತವು 2014ರ ಡಿಸೆಂಬರ್ 31ಕ್ಕೆ ಶೇ. 56.26ಕ್ಕೆ ಏರಿಕೆಯಾಗಿದೆ. 2015ರ ಮಾರ್ಚ್ 31ರ ಅಂತ್ಯಕ್ಕೆ ಈ ಅನುಪಾತವು ಕನಿಷ್ಠ ಶೇ. 60ಕ್ಕೆ ತಲುಪಬೇಕಾಗಿದೆ ಎಂದು ಎಜಿಎಂ ನಾರಾಯಣ್ ತಿಳಿಸಿದರು.
ಸರಕಾರಿ ಸವಲತ್ತುಗಳ ಬಾಕಿ ಅರ್ಜಿಗಳ ತುರ್ತು ಇತ್ಯರ್ಥಕ್ಕೆ ಸಿಇಒ ಸೂಚನೆ:
ಸರಕಾರದ ವಿವಿಧ ಯೋಜನೆಗಳು ಸಂಪೂರ್ಣವಾಗಿ ಲಾನುಭವಿಗಳಿಗೆ ಸಿಗುವಂತಾಗಲು ಬ್ಯಾಂಕುಗಳಿಗೆ ಹಾಗೂ ಅಧಿಕಾರಿಗಳಿಗೆ ಬಂದಿರುವ ಬಾಕಿ ಅರ್ಜಿಗಳನ್ನು ಶೀಘ್ರವೇ ಇತ್ಯರ್ಥಗೊಳಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸಭೆಯಲ್ಲಿ ಸೂಚಿಸಿದರು. ಕೆಲವು ಇಲಾಖೆಗಳು ಮತ್ತು ಬ್ಯಾಂಕುಗಳ ನಡುವೆ ಸಂವಹನದ ಕೊರತೆಯಿಂದಾಗಿ ವಿವಿಧ ಇಲಾಖೆಗಳಲ್ಲಿ 1000ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿರುವ ಬಗ್ಗೆ ಸೂಚನೆ ನೀಡಿದ ಅವರು, ಆಯಾ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕ್‌ಗಳು ಸಮನ್ವಯತೆಯಿಂದ ಬಾಕಿ ಅರ್ಜಿಗಳನ್ನು ವಿಲೇಗೊಳಿಸಬೇಕು ಎಂದರು.
ಇಲಾಖೆಗಳು ಮತ್ತು ಬ್ಯಾಂಕುಗಳು 24 ಗಂಟೆಗಳ ಸಮಯ ಮಿತಿಯೊಳಗೆ ಬಾಕಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದು ನಬಾರ್ಡ್‌ನ ಡಿಡಿಎಂ ಶ್ರೀ ಪ್ರಸಾದ್ ರಾವ್ ತಿಳಿಸಿದರು. ಆರ್‌ಬಿಐ ಎಜಿಎಂ ಲಕ್ಷ್ಮೀಪತಿ ಮಾತನಾಡಿ, ಇದು ಗಂಭೀರ ವಿಷಯ. ಸರಕಾರ ನೀಡಿರುವ ಸವಲತ್ತುಗಳನ್ನು ಸಂಪೂರ್ಣವಾಗಿ ಲಾನುಭವಿಗಳಿಗೆ ಒದಗಿಸಿಕೊಡಲು ತುರ್ತಾಗಿ ಅರ್ಜಿಗಳನ್ನು ಪರಿಶೀಲಿಸಬೇಕಿದೆ. ಕೊನೆಯ ಕ್ಷಣದಲ್ಲಿ ಅರ್ಜಿಗಳನ್ನು ಕೈಗೆತ್ತಿಕೊಳ್ಳುವ ಪರಿಪಾಠ ಒಳ್ಳೆಯದಲ್ಲ ಎಂದರು.