ಮಂಗಳೂರು, ಮಾ.24: ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಎನ್‌ಐಟಿಕೆ ಪ್ರದೇಶದ ರಾ.ಹೆ. 66ರಲ್ಲಿ ಟೋಲ್ ಸಂಗ್ರಹಸಿದಂತೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಆದೇಶಿಸಿದ್ದಾರೆ. ಎನ್‌ಐಟಿಕೆ ಪ್ರದೇಶದ ರಾ.ಹೆ. 66ರಲ್ಲಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸುವ ಬಗ್ಗೆ ಸಾರ್ವಜನಿಕರು ಮತ್ತು ಗುತ್ತಿಗೆದಾರರ ನಡುವೆ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಮನಸ್ತಾಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಈ ಆದೇಶ ನೀಡಿದ್ದಾರೆ.
ಹೆದ್ದಾರಿಯ ಬಹುತೇಕ ಕಾಮಗಾರಿ ಮುಕ್ತಾ ಯಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಇನ್ನೂ ವಿಳಂಬ ಮಾಡಿದ್ದಲ್ಲಿ ನಷ್ಟ ಎದುರಾಗುವ ಭೀತಿಯನ್ನು ಗುತ್ತಿಗೆದಾರರು ವ್ಯಕ್ತಪಡಿಸಿದರು. ಆದರೆ ಇದನ್ನು ಆಕ್ಷೇಪಿಸಿದ ನಾಗರಿಕ ಸಮಿ ತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅವಧಿ ಮುಕ್ತಾ ಯಗೊಂಡರೂ ಕೆಲಸ ಪೂರ್ಣಗೊಳಿಸದ ಬಗ್ಗೆ ಸಭೆಯ ಗಮನ ಸೆಳೆದರು. ಅಲ್ಲದೆ ಈಗ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಿದರೆ ಕಾಮಗಾರಿ ಮತ್ತಷ್ಟು ವಿಳಂಬಗೊಳ್ಳುವ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬೈಕಂಪಾಡಿ ಮೇಲ್ಸೇತುವೆ, ಸರ್ವಿಸ್ ರಸ್ತೆ, ದಾರಿದೀಪ ಮುಂತಾದ ಎಲ್ಲಾ ಕೆಲಸವನ್ನೂ ಪೂರ್ಣಗೊಳಿಸುವವರೆಗೆ ಟೋಲ್ ಕೇಂದ್ರ ಸ್ಥಾಪಿಸಬಾರದು ಎಂದು ಆದೇಶಿಸಿದರು. ಜಿಲ್ಲಾಧಿಕಾರಿ ಈ ಆದೇಶದಿಂದಾಗಿ ನಾಗರಿಕ ಸಮಿತಿಯ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದಂತಾಗಿದೆ.
ಬೈಕಂಪಾಡಿ ಮೇಲ್ಸೇತುವೆ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಸಾಕಷ್ಟು ಸಭೆ ನಡೆಸಿ ಕಾಲ ಮಿತಿಯನ್ನು ನೀಡಲಾಗಿದ್ದರೂ ಅದನ್ನು ಕಡೆಗಣಿಸಲಾಗಿರುವ ಬಗ್ಗೆ ಜಿಲ್ಲಾಧಿಕಾರಿ ಸಂಬಂಧಿಸಿದವರನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.