ಕನ್ನಡ ವಾರ್ತೆಗಳು

ದರೋಡೆಗೆ ಸಂಚು : ಮೂವರು ಆರೋಪಿಗಳ ಬಂಧನ.

Pinterest LinkedIn Tumblr

akash_bhavan_robbery_1

ಮಂಗಳೂರು,ಮಾರ್ಚ್.24 : ಆಕಾಶಭವನ ಸಮೀಪ ದಾರಿಯಲ್ಲಿ ಹೋಗುವವರನ್ನು ದರೋಡೆಗೈಯ್ಯಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಕಾವೂರು ಎಸ್.ಐ. ನೇತೃತ್ವದ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಉರ್ವ ಬೋಳೂರು ನಿವಾಸಿಗಳಾದ ಕೃಷ್ಣ (25), ಪ್ರವೀಣ್ (25) ಮತ್ತು ಆಕಾಶಭವನ ನಿವಾಸಿ ದೀಕ್ಷಿತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಮೂವರು ಪಲ್ಸರ್ ಬೈಕಿನಲ್ಲಿ ಆಕಾಶಭವನದ ಪರಪ್ಪಾದೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ತಿರುಗಾಡುತ್ತಿರುವ ಮಾಹಿತಿ ಪಡೆದ ಕಾವೂರು ಪೊಲೀಸರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾರ್ಯಾಚರಣೆ ಸಂದರ್ಭ ಬೈಕಿನಲ್ಲಿ ಪರಾರಿಯಾಗುತ್ತಿದ್ದ ಮೂವರನ್ನು ಜೀಪಿನಲ್ಲಿ ಅಡ್ಡಗಟ್ಟಿ ಬಳಿಕ ಬಂಧಿಸಲಾಗಿದೆ.

akash_bhavan_robbery_2

ಬಂಧಿತರಿಂದ ಮೂರು ತಲವಾರು, ಮೆಣಸಿನ ಹುಡಿ ಮತ್ತು ಪಲ್ಸರ್ ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಕಾಶಭವನ ಭಾಗದಲ್ಲಿ ರಾತ್ರಿಯಾಗುತ್ತಿದ್ದಂತೆ ಅಪರಿಚಿತ ತಂಡ ಬೈಕ್, ಕಾರಿನಲ್ಲಿ ತೆರಳುವವರನ್ನು ಹಿಂಬಾಲಿಸಿ ಅಡ್ಡಗಟ್ಟಿ ದರೋಡೆಗೈದ ಪ್ರಕರಣಗಳು ಇತ್ತೀಚೆಗೆ ನಡೆದಿತ್ತು. ಆದರೆ ದರೋಡೆಗೊಳಗಾದವರು ಹೆದರಿ ಯಾವುದೇ ದೂರುಗಳನ್ನು ದಾಖಲಿಸಿರಲಿಲ್ಲ. ರಾತ್ರಿ ಹೊತ್ತಿನಲ್ಲಿ ಅಪರಿಚಿತರೂ ಸುಳಿದಾಡುವ ಕುರಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಬಂಧಿತ ಮೂವರು ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ತಲವಾರು ಜಗ್ಗನ ಸಹಚರರಾಗಿದ್ದಾರೆ.

ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Write A Comment