ಬಂಟ್ವಾಳ, ಮಾ.24: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಬಂಟ್ವಾಳ ಪುರಸಭೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 52. 79 ಕೋಟಿ ರೂ. ವೆಚ್ಚದ ಬಂಟ್ವಾಳ ಪುರಸಭೆ ವ್ಯಾಪ್ತಿಯ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ ಬಂಟ್ವಾಳದ ಜಕ್ರಿಬೆಟ್ಟು ನದಿ ಕಿನಾರೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ಜಕ್ರಿಬೆಟ್ಟು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡ ಲಾಗಿದೆ.
ಯುಐಡಿಎಸ್‌ಎಂಟಿ ಯೋಜನೆಯಡಿ ಈ ಹಿಂದಿನ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ 7,200 ಕೋ.ರೂ. ಪ್ರಸ್ತಾಪವನ್ನು ಸಲ್ಲಿಸಿತ್ತು. ಅದರಲ್ಲಿ 1,000 ಕೋಟಿ ಅನುದಾನ ಮಂಜೂರಾಗಿದ್ದು, ಬಂಟ್ವಾಳದ ಯೋಜನೆಯೂ ಅದರಲ್ಲಿ ಸೇರಿದೆ ಎಂದು ಅವರು ತಿಳಿಸಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 12.27 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡಿದ್ದು, ಹೆಚ್ಚುವರಿ ಯಾಗಿ 61.45 ಕೋ.ರೂ. ಅನುದಾನ ಬಿಡುಗಡೆಯಾಗಲಿದೆ.
ಬೆಳ್ತಂಗಡಿಯಲ್ಲಿ 13 ಕೋ.ರೂ. ವೆಚ್ಚದ ಯೋಜನೆಗೆ ಮಂಜೂರಾತಿ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ತುಂಬೆ ನೂತನ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 75 ಕೋಟಿ ಅನುದಾನವನ್ನು ಮಂಡಳಿಯ ಮೂಲಕ ಒದಗಿಸಲು ಯೋಜನೆ ರೂಪಿಸಲಾಗಿದ್ದು, ಮಳೆ ಪ್ರಾರಂಭವಾಗುವ ಮೊದಲು ಕಾಮಗಾರಿ ಪೂರ್ತಿಗೊಳಿಸುವ ಬಗ್ಗೆ ಅಕಾರಿಗಳೊಂದಿಗೆ ಚರ್ಚಿಸ ಲಾಗಿದೆ ಎಂದರು.
ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗೆ 65 ಕೋಟಿ ರೂ., ಸುಳ್ಯದಲ್ಲಿ ಪಯಸ್ವಿನಿ ನದಿಯನ್ನು ಬಳಸಿಕೊಂಡು ಕುಡಿಯುವ ನೀರಿನ ಯೋಜನೆಗೆ 65.60 ಕೋಟಿ ರೂ., ಎಡಿಬಿ ಸ್ಕೀಮಿನ ಮೂಲಕ ಮಂಗಳೂರಿ ನಲ್ಲೂ ಒಳಚರಂಡಿಗೆ ಎರಡನೆ ಹಂತದಲ್ಲಿ 280 ಕೋಟಿ ರೂ, ಪುತ್ತೂರಿಗೆ 90 ಕೋ.ರೂ. ಅನುದಾನ ಮಂಜೂರಾಗಿರುವುದಾಗಿ ಅಂಕಿಅಂಶ ನೀಡಿದ ಸಚಿವ ವಿನಯ ಕುಮಾರ್ ಸೊರಕೆ ಜಿಲ್ಲೆಯಲ್ಲಿ ಕುಡಿಯುವ ನೀರು, ಒಳಚರಂಡಿ ಹಾಗೂ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಇಲಾಖೆಗಳಲ್ಲಿ ಕೊರತೆಯಿರುವ ಸಿಬ್ಬಂದಿಯ ನೇಮಕಾತಿಗೆ ಚಾಲನೆ ನೀಡಲಾಗಿದೆ. 94ಸಿಸಿ ಯೋಜನೆಯಡಿ ನಗರ ಭಾಗದಲ್ಲಿ ಸರಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿದವರಿಗೆ ಹಕ್ಕು ಪತ್ರ ನೀಡಲು ಶೀಘ್ರ ಅರ್ಜಿ ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದರು. ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ನಗರ ಯೋಜನ ಪ್ರಾಕಾರದ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮುಹಮ್ಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಕ.ನ.ನೀಸ. ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಎಂ.ರಂಗಧಾಮಯ್ಯ, ಪುರಸಭಾ ಮುಖ್ಯಾಕಾರಿ ಲೀನಾ ಬ್ರಿಟ್ಟೋ, ತಹಶೀಲ್ದಾರ್ ಪುರಂದರ ಹೆಗ್ಡೆ, ಪಿಡಬ್ಲ್ಯುಡಿ ಮುಖ್ಯ ಅಭಿಯಂತರ ಧರ್ಮರಾಜ್, ತಾಂತಿಕ ಶಿಕ್ಷಣ ಇಲಾಖೆಯ ತಾಂತ್ರಿಕ ಅಕಾರಿ ಸಿ.ಡಿ.ರಾಮಲಿಂಗಯ್ಯ ಹಾಗೂ ಪುರಸಭಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಭರತ್ ಸ್ವಾಗತಿಸಿ, ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಚಿನ್ನಗಿರಿಗೌಡ ಹಾಗೂ ಕ.ನ.ನೀ.ಸ. ಮತ್ತು ಒ.ಚ. ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ನಟರಾಜ್ ಪ್ರಸ್ತಾವಿಸಿದರು. ಎಂಜಿನಿ ಯರ್ ಶುಭಲಕ್ಷ್ಮೀ ವಂದಿಸಿದರು.