ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಖಾಸಗಿ ಶಿಕ್ಷಣ ಸಂಸ್ಥೆಯ ವಾಹನ ಚಾಲಕ, ಆ ಶಾಲೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪ್ರಕರಣವನ್ನು ನಿರ್ಲಕ್ಷಿಸಿದ ಶಾಲಾಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ದ.ಕ.ಜಿಲ್ಲಾಕಾರಿ ಕಚೇರಿ ಎದುರು ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ತೊಕ್ಕೊಟ್ಟಿನ ನಂ ಒನ್ ನರ್ಸರಿ ಶಾಲೆಯಲ್ಲಿ ಕಲಿಯುತ್ತಿದ್ದ ಮೂರೂವರೆ ವರ್ಷದ ಮಾಡೂರಿನ ಬಾಲಕಿಯ ಮೇಲೆ ಶಾಲಾ ವಾಹನದ ಚಾಲಕ ನಡೆಸಿದ್ದಾನೆ ಎನ್ನಲಾದ ಲೈಂಗಿಕ ಕಿರುಕುಳದ ವಿರುದ್ಧ ಮುಸ್ಲಿಂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಅಕ್ರೋಷ ವ್ಯಕ್ತಪಡಿಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆ ಆಯೋಜಿಸಿತ್ತು. ಸಂಘಟನೆಗಳ ಮುಖಂಡರು ಲೈಂಗಿಕ ಕಿರುಕುಳ ನೀಡಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರಗಿಸಬೇಕು. ಮಾತ್ರವಲ್ಲದೇ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ತೋರಿದ ಶಾಲಾಡಳಿತ ಮಂಡಳಿಯ ವಿರುದ್ಧ ಕೂಡ ಕಠಿಣ ಕ್ರಮ ಜರಗಿಸಬೇಕು. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಒತ್ತಾಯಿಸಿದರು.