ಮೈಸೂರು: ‘ಹಾಯ್ ಕೃಷ್ಣ’ ಚಿತ್ರದ ನಾಯಕ ನಟ ನವೀನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಮೈಸೂರಿನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಬೋಗಾದಿಯ ತೋಟದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮಣಿ ಹಾಗೂ ಮನು ಎಂಬ ಇಬ್ಬರು ಆರೋಪಿಗಳನ್ನು ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮಾರ್ಚ್ 15 ರಂದು ಬೆಳವಾಡಿಯ ಮಾರಮ್ಮನ ಜಾತ್ರೆಯಲ್ಲಿ ಭಾಗವಹಿಸಿದ್ದ ನವೀನ್ ರನ್ನು ಆರಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ನೂರಾರು ಜನರ ಸಮ್ಮುಖದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಹಳೆ ವೈಷಮ್ಯವೇ ಕೊಲೆಗೆ ಕಾರಣವೆಂದು ಹೇಳಲಾಗಿದ್ದು, ನವೀನ್ ತನ್ನ ಸ್ನೇಹಿತ ಲೋಕೇಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅದರ ಸೇಡು ತೀರಿಸಿಕೊಳ್ಳಲು ನವೀನ್ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ನಾಪತ್ತೆಯಾಗಿರುವ ಇತರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.