ಸುರತ್ಕಲ್: ಚೊಕ್ಕಬೆಟ್ಟು ಬಳಿ 2014ರ ಡಿ. 23ರಂದು ನಡೆದ ನಗದು, ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಈ ಕೃತ್ಯಕ್ಕೆ ಬಳಸಲಾದ ಬೈಕ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇಡ್ಯಾ ನಿವಾಸಿ ಶರೀನ್ ಎಂಬ ಯುವಕ ಮಂಗಳೂರು ಕಡೆಗೆ ಬೈಕ್‌ನಲ್ಲಿ ಸಾಗಿಸುತ್ತಿದ್ದ 1.5 ಲಕ್ಷ ರೂ ನಗದು, 192 ಗ್ರಾಂ ಚಿನ್ನಾಭರಣವನ್ನು ಚೊಕ್ಕಬೆಟ್ಟು ರಸ್ತೆಯ ಸೇತುವೆ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಕತ್ತಿ ತೋರಿಸಿ ದರೋಡೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಇಡ್ಯಾ ನಿವಾಸಿ ನಜೀಮ್ ಹಫೀಜ್(25), ದೇರಳಕಟ್ಟೆ ಬೆಳ್ಮ ನಿವಾಸಿ ಶಬೀರ್(28), ಸುರತ್ಕಲ್ ಬಳಿಯ ಜನತಾ ಕಾಲೊನಿ ನಿವಾಸಿ ಮಹಮ್ಮದ್ ಆಸಿಫ್,(24) ಮಂಜನಾಡಿ ನಿವಾಸಿ ಸಮೀರ್ ಹಂಸ(30) ಎಂಬವರನ್ನು ಬಂಧಿಸಿದ್ದಾರೆ.
ನಗದು,ಚಿನ್ನಾಭರಣ ಸಗಾಟ ಬಗ್ಗೆ ನೆರೆಮನೆಯಾತನಿಂದ ಮಾಹಿತಿ :
ಶರೀನ್ ಚೊಕ್ಕಬೆಟ್ಟಿನ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಅವನ ಗೆಳೆಯ ನಹೀಮ್ ನಗದು ಹಣ ಹಾಗೂ ತನ್ನ ಅಣ್ಣನ ಹೆಂಡತಿಗೆ ಸೇರಿದ್ದ ಬಂಗಾರವನ್ನು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ನೀಡುವುಕ್ಕಾಗಿ ಕಾವೂರಿಗೆ ಬೈಕ್‌ನಲ್ಲಿ ಹೋಗಿ ತಲುಪಿಸುವಂತೆ ಶರೀನ್‌ಗೆ ತಿಳಿಸಿದ್ದ. ಈ ಬಗ್ಗೆ ಮಾಹಿತಿ ಪಡೆದಿದ್ದ ಶರೀನ್‌ನ ನೆರೆಮನೆ ನಿವಾಸಿ ನಜೀಮ್ ಹಫೀಜ್‌ನು ಅಸೀಫ್, ಶಬೀರ್ ಮತ್ತಿತರರಿಗೆ ಈ ಹಣ ಚಿನ್ನಾಭರಣ ದರೋಡೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದ.
ಪ್ರಮುಖ ಆರೋಪಿಗಳಾದ ರಾಜ ಹಾಗೂ ಹಂಸ ಚೊಕ್ಕಬೆಟ್ಟು ಸೇತುವೆ ಬಳಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಈ ಘಟನೆಗೆ ಬಳಸಲಾದ ಬೈಕ್ ಹಂಸನ ಗೆಳೆಯನಿಗೆ ಸೇರಿದ್ದು, ದರೋಡೆ ಮಾಡಿದ ಚಿನ್ನಾಭರಣ ಇನ್ನಷ್ಟೆ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ. ಅದಕ್ಕಾಗಿ ಆರೋಪಿಗಳನ್ನು ಮತ್ತೆ ಕಸ್ಟ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಮುಖ ಆರೋಪಿ ರಾಜ ಹಾಗೂ ಇನ್ನು ಕೆಲವು ಆರೋಪಿಗಳ ಬಂಧನ ಬಾಕಿಯಿದೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.