ಕನ್ನಡ ವಾರ್ತೆಗಳು

ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ಬಗ್ಗೆ ಒಂದು ತಿಂಗಳೊಳಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅಳವಡಿಸಲು ಶಾಲಾ ಕಾಲೇಜು ಪ್ರಾಂಶುಪಾಲರು, ಮುಖ್ಯಸ್ಥರಿಗೆ ಕಮಿಷನರ್ ನಿರ್ದೇಶನ

Pinterest LinkedIn Tumblr

DC_Police_Meet

ಮಂಗಳೂರು, ಮಾ. 18: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳು ಪ್ರಯಾಣಿಸುವ ಶಾಲಾ ವಾಹನ ಸೇರಿದಂತೆ ಶಾಲಾ ಕಾಲೇಜು ಆವರಣದೊಳಗೆ ಸಿಸಿಟಿವಿ ಅಳವಡಿಕೆ ಸೇರಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಒಂದು ತಿಂಗಳೊಳಗೆ ಅಳವಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಶಾಲಾ ಕಾಲೇಜು ಪ್ರಾಂಶುಪಾಲರು ಹಾಗೂ ಮುಖ್ಯಸ್ಥರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಶಾಲಾ ಮಕ್ಕಳ ಸುರಕ್ಷತೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಪೊಲೀಸ್ ಇಲಾಖೆಯಿಂದ ನೀಡಲಾದ ಮಾರ್ಗಸೂಚಿಗಳನ್ನು ಅಳವಡಿಸಲು ನಿರ್ಲಕ್ಷ ತೋರಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಶಾಲಾ ಆಡಳಿತ ಮಂಡಳಿಯನ್ನೇ ಹೊಣೆಯನ್ನಾಗಿಸಲಾಗುವುದು ಎಂದು ಅವರು ಹೇಳಿದರು.

ಪೊಕ್ಸೊ ಕಾಯ್ದೆಯಡಿ 18 ವರ್ಷದೊಳಗಿನ ಮಕ್ಕಳು ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಾಗಿದ್ದು, ಉಳಿದ ಕಾಲೇಜುಗಳಲ್ಲಿಯೂ ಈ ಮಾರ್ಗಸೂಚಿಗಳನ್ನು ಅಳವಡಿಸಿದರೆ ಸ್ವಾಗತಾರ್ಹ ಎಂದು ಅವರು ಹೇಳಿದರು. ಸಭೆಯಲ್ಲಿ ಸರಕಾರಿ ಶಾಲೆಗಳಲ್ಲಿ ಸಿಸಿಟಿವಿ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ಅಳವಡಿಸಲು ಅನುದಾನದ ಕೊರತೆ ಇರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಕ್ಕಳ ಭವಿಷ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಶಾಲಾ ಆಡಳಿತ ಮಂಡಳಿಯ ಕರ್ತವ್ಯ. ಸರಕಾರಿ ಶಾಲೆಗಳು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ನಿಧಿಯನ್ನು ಬಳಸಿ ಸುರಕ್ಷಾ ಕ್ರಮಗಳನ್ನು ಅಳವಡಿಸುವಂತೆ ಆಯುಕ್ತ ಮುರುಗನ್ ಸಲಹೆ ನೀಡಿದರು.

ಸಭೆಯಲ್ಲಿ ಎಸಿಪಿ ರವಿ ಕುಮಾರ್ ವಂದಿಸಿದರು.

ಮಕ್ಕಳ ಸುರಕ್ಷತೆಗಾಗಿ ಹಲವು ಮಾರ್ಗಸೂಚಿಗಳು…

ಶಾಲಾ ವಾಹನಗಳು ಖಾಸಗಿಯವರ ನಿರ್ವಹಣೆಯಲ್ಲಿದ್ದರೆ ಪ್ರತಿ ವಾಹನದಲ್ಲಿ ಮಕ್ಕಳ ಪಿಕಪ್ ಮತ್ತು ಡ್ರಾಪ್‌ವರೆಗೂ ಶಾಲೆಯಿಂದ ಜವಾಬ್ದಾರಿಯುತ ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಾರಿಗೆ ಇಲಾಖೆಯಿಂದ ನಿಗದಿಪಡಿಸಿದ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಾರದು. ವಾಹನಕ್ಕೆ ಜಿಪಿಎಸ್ ಅಳವಡಿಸತಕ್ಕದ್ದು. ಚಾಲಕ ಪರವಾನಿಗೆ ಹೊಂದಿರುವುದನ್ನು ಖಾತರಿಪಡಿಸಬೇಕು. ಚಾಲಕನ ಪೂರ್ವಪರ ನಡತೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ವರದಿ ಪಡೆಯಬೇಕು. ವಾಹನದಲ್ಲಿ ಸಿಸಿಟಿವಿ ಅಳವಡಿಸಬೇಕು. ಬಸ್ಸಿನ ಒಳಗೆ ಹಾಗೂ ಬಸ್ಸಿನ ಬಾಗಿಲಿನಿಂದ ರಸ್ತೆ ಕಾಣುವಂತೆ ಸಿಸಿಟಿವಿ ಅಳವಡಿಸಬೇಕು. ಶಾಲಾ ವಾಹನದ ಚಾಲಕರ ಯಾವುದೇ ರೀತಿಯ ತಪ್ಪು, ಕಾನೂನು ಮೀರಿದ ನಡವಳಿಕೆಗೆ ವಾಹನ ಮಾಲಕರೇ ಜವಾಬ್ದಾರರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಖಾಸಗಿ ವಾಹನ ಮಾಲಕರ ಜೊತೆ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ಶಾಲಾ ಬಸ್ಸುಗಳು ಮತ್ತು ಇತರ ವಾಹನಗಳ ಚಾಲಕರು ಅನಗತ್ಯವಾಗಿ ಶಾಲೆಯಲ್ಲಿ ಎಲ್ಲೆಂದರಲ್ಲಿ ತಿರುಗಾಡಬಾರದು. ಶಾಲಾ ಮಕ್ಕಳ ಜೊತೆ ಅನಗತ್ಯವಾಗಿ ಮಾತನಾಡುವುದು, ಮಕ್ಕಳ ಗೌರವಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ವರ್ತಿಸದಂತೆ ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು.

ಶಾಲೆಯ ಆಟದ ಮೈದಾನ, ಈಜುಕೊಳ, ಪ್ರಯೋಗ ಶಾಲೆ, ಲೈಬ್ರರಿ, ಡ್ಯಾನ್ಸಿಂಗ್ ಹಾಲ್, ವ್ಯಾಯಾಮ ಶಾಲೆ ಮೊದಲಾದ ಸ್ಥಳಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಪಟ್ಟ ಶಿಕ್ಷಕರು/ಮೇಲ್ವಿಚಾರಕರು ಮಾತ್ರವೇ ಹಾಜರಿರಬೇಕು. ಎಲ್ಲಾ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಓರ್ವ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಆ ವಾಹನದಲ್ಲಿ ಎಲ್ಲಾ ಮಕ್ಕಳು ವಾಹನದಿಂದ ಇಳಿದು ಮನೆಗೆ ಹೋಗುವ ತನಕ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಶಾಲೆ ಪ್ರವೇಶಿಸುವ ಎಲ್ಲಾ ಕಡೆಗಳಲ್ಲಿ ಸಣ್ಣ ಗೇಟ್ ಇದ್ದರೂ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಶಾಲೆಯ ಎಲ್ಲಾ ತರಗತಿ, ಸ್ಟಾಫ್‌ರೂಂ, ಜಿಮ್, ಈಜುಕೊಳ ಹಾಗೂ ಇತರ ಅಗತ್ಯ ಕಡೆಗಳಲ್ಲಿ (ವಾಶ್‌ರೂಂ ಹೊರತುಪಡಿಸಿ) ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಈಜು ಕಲಿಸುವವರು, ಜಿಮ್ ಇನ್‌ಸ್ಟ್ರಕ್ಟರ್‌ಗಳು ಕನಿಷ್ಠ ಒಂದು ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು ಹಾಗೂ ಸೂಪರ್‌ವೈಸರ್ ಟೀಚರ್ ಆಗಿ ಒಬ್ಬರು ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು.

ಸಂಜೆ 6 ಗಂಟೆಯ ನಂತರ ಯಾವುದೇ ಶಾಲೆಗಳಲ್ಲಿ ತರಗತಿಗಳನ್ನು ಕಡ್ಡಾಯವಾಗಿ ನಡೆಸಬಾರದು. ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಯಾವುದೇ ಸ್ಪರ್ಧೆಗಳನ್ನು ಸಂಜೆ 6 ಗಂಟೆಯೊಳಗೆ ಮುಗಿಸಿ ಮಕ್ಕಳನ್ನು ವಾಪಸು ಕಳುಹಿಸತಕ್ಕದ್ದು. ಶಿಕ್ಷರು, ಶಾಲಾ ವಾಹನಗಳ ಚಾಲಕರ/ಸಿಬ್ಬಂದಿಯ, ಆಯಾಗಳ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ವಿದ್ಯಾರ್ಥಿಗಳ ಪೋಷಕರಿಗೆ ನೀಡಬೇಕು. ಪ್ರತಿಯೊಂದು ಶಾಲೆಯಲ್ಲಿ ಪ್ರಾಂಶುಪಾಲರ ನೇತೃತ್ವದಲ್ಲಿ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ ರಚಿಸಿ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಲಿಂಗ ಸೂಕ್ಷ್ಮತೆ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು. ಶಾಲಾ ಸಿಬ್ಬಂದಿಗೆ, ಭದ್ರತಾ ಕರ್ತವ್ಯ ನಿರ್ವಹಿಸುವವರಿಗೆ ಹಾಗೂ ಇತರರಿಗೆ ಮಕ್ಕಳ ಹಕ್ಕು, ಪೊಸ್ಕೊ ಕಾಯ್ದೆ, ಲಿಂಗ ಸೂಕ್ಷ್ಮತೆ ಬಗ್ಗೆ ಜಾಗೃತಿ ಮೂಡಿಸಬೇಕು.

ಶಾಲಾ ಭದ್ರತಾ ಕರ್ತವ್ಯದ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿಗಳಿಂದ ಪಡೆದುಕೊಳ್ಳುವ ಸಂದರ್ಭದಲ್ಲಿ ಸರಕಾರದಿಂದ ಮಾನ್ಯತೆ ಪಡೆದಂತಹ ಏಜೆನ್ಸಿಗಳಿಂದ ಮಾತ್ರ ಪಡೆಯತಕ್ಕದ್ದು ಎಂಬ ಮಾರ್ಗಸೂಚಿಗಳ ವಿವರವನ್ನು ಡಿಸಿಪಿ ಸಂತೋಷ್ ಬಾಬು ಸಭೆಯಲ್ಲಿ ನೀಡಿದರು. ಮಾರ್ಗಸೂಚಿಗಳನ್ನು ಅಳವಡಿಸಲಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಸ್ಥಳೀಯ ಠಾಣಾ ಪೊಲೀಸರು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಲಿರುವರು ಎಂದು ಅವರು ಹೇಳಿದರು. ಕಾರು ಚಾಲಕರಿಗೆ ಸೀಟು ಬೆಲ್ಟ್ ಕಡ್ಡಾಯ: ಜಿಲ್ಲಾಧಿಕಾರಿ
ಮಂಗಳೂರು, ಮಾ. 17: ರಸ್ತೆ ಸಂಚಾರದ ಸಂದರ್ಭ ಸಾರ್ವ ಜನಿಕರ ಪ್ರಾಣ ರಕ್ಷಣೆಯ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲೂ ಕಾರು ಚಾಲಕರು ಕಡ್ಡಾಯವಾಗಿ ಸೀಟು ಬೆಲ್ಟ್ ಹಾಕುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಬೆಲ್ಟ್ ಹಾಕದವರ ವಿರು್ಧ ದಂಡ ವಸೂಲು ಮಾಡುವ ಮೂಲಕ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷತೆಯ ಕುರಿತಂತೆ ಇಂದು ನಡೆದ ಸಭೆಯಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳು ಹಾಗೂ ಅದರಿಂದಾಗುತ್ತಿರುವ ಪ್ರಾಣಾಪಾಯಗಳ ಕುರಿತಂತೆ ರಸ್ತೆ ಸಂಚಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಚಾರಿ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕಾರು ಚಾಲನೆಯ ಸಂದರ್ಭದಲ್ಲಿ ಬೆಲ್ಟ್ ಹಾಕಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಹಾಗಾಗಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಹಾಗೂ ನಿಯಮ ಪಾಲಿಸದಿದ್ದರೆ ದಂಡ ವಸೂಲು ಮಾಡಬೇಕು ಎಂದು ಅವರು ಹೇಳಿದರು.

ಸಿಟಿ ಬಸ್‌ಗಳಿಗೆ ಬಾಗಿಲು ಅಳವಡಿಕೆ ಬಗ್ಗೆ ಆರ್‌ಟಿಎ ಸಭೆಯಲ್ಲಿ ನಿರ್ಧಾರ

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಿಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬಾಗಿಲು ಅಳವಡಿಕೆ ಅಗತ್ಯತೆ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಆದರೆ ನಿಯಮದ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಸ್‌ಗಳಿಗೆ ಬಾಗಿಲು ಅಳವಡಿಕೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಬಿಟ್ಟ ವಿಷಯ ವಾಗಿದ್ದು, ಅಳವಡಿಕೆ ಕಡ್ಡಾಯವಲ್ಲ ಎಂಬ ಹಿನ್ನೆಲೆಯಲ್ಲಿ ಈ ಬಗ್ಗೆ ಮುಂದಿನ ಆರ್‌ಟಿಎ (ಸಾರಿಗೆ ಪ್ರಾಧಿಕಾರ) ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 31 ಕಡೆಗಳಲ್ಲಿ ಸಂಚಾರಿ ಪೊಲೀಸರ ನಿರ್ದೇಶನದ ಮೇರೆಗೆ ವೇಗ ನಿಯಂತ್ರಕಗಳನ್ನು (ಸ್ಪೀಡ್ ಬ್ರೇಕರ್) ಅಳವಡಿಸಲಾಗಿದೆ ಎಂದು ತಿಳಿಸಿದ ಮನಪಾ ಉಪ ಆಯುಕ್ತ ಕಾಂತರಾಜು, ಆಟೊರಿಕ್ಷಾ ತಂಗುದಾಣ, ಬಸ್ ತಂಗುದಾಣ ನಿರ್ಮಾಣಕ್ಕೆ ಸಂಬಂಧಿಸಿ ಮನಪಾ ಪರಿಷತ್‌ಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಮಂಡಿಸಲಾಗಿದೆ. ಆದರೆ ಇನ್ನಷ್ಟೇ ಒಪ್ಪಿಗೆ ದೊರೆಯಬೇಕಿದೆ ಎಂದರು. ಆಟೊ ಚಾಲಕ ಮಾಲಕ ಸಂಘದ ಪದಾಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕರೆದು ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ತಿಳಿಸಿದರು.

ನಗರದಲ್ಲ 40 ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಲು ಸೂಚಿಸಲಾಗಿದ್ದು, ಬಾವುಟಗುಡ್ಡೆಯಲ್ಲಿ ಮಾತ್ರವೇ ತಂಗು ದಾಣ ರಚಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಸಹಾಯಕ ಆಯುಕ್ತ ಉದಯ ನಾಯ್ಕೆ ಸಭೆಯಲ್ಲಿ ತಿಳಿಸಿದರು. ವೇಗದೂತ ಬಸ್‌ಗಳನ್ನು ಸಂಚಾರಿ ಪೊಲೀಸರು ತಪಾಸಣೆಗಾಗಿ ಅಲ್ಲಲ್ಲ ತಡೆಹಿಡಿದು ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಸಾರ್ವಜನಿಕರ ಪರವಾಗಿ ಬಾಲಕೃಷ್ಣ ಎಂಬವರು ಸಭೆಯ ಗಮನ ಸೆಳೆದರು. ಬಂಟ್ಸ್ ಹಾಸ್ಟೆಲ್ ರಸ್ತೆ ಆಗಿದ್ದರೂ ಫುಟ್‌ಪಾತ್ ಆಗಿಲ್ಲದ ಕಾರಣ ಪಾದಚಾರಿಗಳು ಪರದಾಡುವಂತಾಗಿದೆ ಎಂದು ಸಮಾಜ ಸೇವಕರಾದ ಬಿ.ಎಸ್. ಹಸನಬ್ಬ ಹೇಳಿದರು.

ಬಸ್‌ಗಳಲ್ಲಿ ಶಿಸ್ತು ಪಾಲನೆಯಾಗುತ್ತಿಲ್ಲ:

ಕೆಲ ದಿನಗಳ ಹಿಂದೆ ಬೆಳಗ್ಗಿನ 6 ಗಂಟೆಯ ವೇಳೆಯಲ್ಲಿ ತಾನು ಖುದ್ದಾಗಿ ಅಧಿಕಾರಿಗಳ ಜೊತೆ ತಪಾಸಣೆ ನಡೆಸಿದ ವೇಳೆ ನಗರದ ಬಸ್‌ಗಳಲ್ಲಿ ಶಿಸ್ತು ಪಾಲನೆಯಾಗದಿರುವುದು ಕಂಡು ಬಂದಿದೆ. ಬಸ್ಸು ನಿಲ್ದಾಣಗಳಲ್ಲಿ ಪ್ರಯಾಣಿಕರು ನಿಂತಿದ್ದಾಗಲೇ ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ತಂದು ನಿಲ್ಲಿಸುವ ಮೂಲಕ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಅಗತ್ಯ ಎಂದು ಮನಪಾ ಆಯುಕ್ತೆ ಹೆಫ್ಸಿಬಾ ಸಭೆಯಲ್ಲಿ ತಿಳಿಸಿದರು. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಫುಟ್‌ಪಾತ್ ಸೇರಿದಂತೆ ರಸ್ತೆ ಸುರಕ್ಷತೆಗೆ ಅಗತ್ಯವಾದ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಈ ಸಂದರ್ಭ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಡಿಸಿಪಿ ವಿಷ್ಣುವಧರ್ನ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಹ್ಮದ್ ಅಫ್ಝಲ್ ಖಾನ್ ಉಪಸ್ಥಿತರಿದ್ದರು.

Write A Comment