ಮಂಗಳೂರು, ಮಾ.18: ನಗರದ ಪಂಪ್‌ವೆಲ್‌ನಲ್ಲಿ ನಿನ್ನೆ ಮಧ್ಯಾಹ್ನದ ಹೊತ್ತಿನಲ್ಲೇ ಕ್ರೈಸ್ತ ಭಗಿನಿಯೊಬ್ಬರ ಅಪಹರಣ ಯತ್ನ ನಡೆದಿದ್ದು, ಘಟನೆಯಿಂದಾಗಿ ಆಘಾತಕ್ಕೊಳಗಾಗಿರುವ ಭಗಿನಿ ಪ್ರಸ್ತುತ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಗರದ ಖಾಸಗಿ ವೈದ್ಯಕೀಯ ಆಸ್ಪತ್ರೆ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿರುವ ಭಗಿನಿ ನಿನ್ನೆ ಮಧ್ಯಾಹ್ನದ ವೇಳೆಗೆ ತುಂಬೆಯಲ್ಲಿರುವ ಸಂಸ್ಥೆಯಿಂದ ನಗರದ ಸಂಸ್ಥೆಗೆ ಹಿಂದಿ ರುಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಪಂಪ್‌ವೆಲ್ ಬಳಿ ಬಸ್ಸಿನಿಂದಿಳಿದು ತಮ್ಮ ಸಂಸ್ಥೆಯತ್ತ ಸಾಗುತ್ತಿದ್ದ ವೇಳೆ ನಿಧಾನ ಗತಿಯಲ್ಲಿ ಬಂದ ರಿಕ್ಷಾದಲ್ಲಿದ್ದ ವ್ಯಕ್ತಿಯೊಬ್ಬ ಭಗಿನಿಯನ್ನು ರಿಕ್ಷಾ ದೊಳಕ್ಕೆ ಕೈಹಿಡಿದು ಎಳೆದು ಹತ್ತಿಸಿಕೊಂಡಿದ್ದ.
ಘಟನೆಯ ಸಂದರ್ಭ ಆಘಾತಕ್ಕೊಳಗಾದ ಭಗಿನಿಗೆ ಏನು ನಡೆಯುತ್ತಿದೆ ಎಂಬ ಅರಿವೇ ಇರಲಿಲ್ಲ. ಭಗಿನಿ ಕೇರಳ ಮೂಲದವರಾಗಿರುವುದರಿಂದ ಇಲ್ಲಿನ ಕೆಲವು ಕಡೆಗಳ ಗುರುತು, ಭಾಷೆಯ ಅರಿವೂ ಇಲ್ಲದಿರುವುದರಿಂದ ರಿಕ್ಷಾದಲ್ಲಿದ್ದ ವ್ಯಕ್ತಿ ಏನು ಮಾತನಾಡುತ್ತಾನೆಂಬುದೂ ತಿಳಿಯಲಿಲ್ಲ. ಪಂಪ್‌ವೆಲ್‌ನಿಂದ ಅಗಲವಾದ ರಸ್ತೆಯಲ್ಲಿ ಪ್ರಯಾಣಿಸಿದ್ದಾಗಿ ಭಗಿನಿ ಹೇಳಿರುವುದರಿಂದ ರಿಕ್ಷಾ ಪಂಪ್‌ವೆಲ್‌ನಿಂದ ನಂತೂರು ರಸ್ತೆಯಾಗಿ ಚಲಿಸಿರುವುದಾಗಿ ಕಂಡು ಬರುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ.ರುಡಾಲ್ಫ್ ವರದಿಗಾರರಿಗೆ ಘಟನೆಯ ಬಗ್ಗೆ ಭಗಿನಿ ನೀಡಿರುವ ಮಾಹಿತಿಯನ್ನು ತಿಳಿಸಿದ್ದಾರೆ.
‘‘ಭಗಿನಿಯ ಕೈಯಲ್ಲಿದ್ದ ಮೊಬೈಲ್, ವಾಚ್ ಹಾಗೂ ಬ್ಯಾಗ್‌ನ್ನು ಕಸಿದುಕೊಂಡ ರಿಕ್ಷಾದಲ್ಲಿದ್ದ ವ್ಯಕ್ತಿ ಅವರನ್ನು ಶಿವಬಾಗ್ ಬಳಿ ಬಿಟ್ಟು ಹೋಗಿದ್ದು, ಭಗಿನಿಯು ದಾರಿ ಹೋಕರೊಬ್ಬರ ಮೊಬೈಲ್ ಮೂಲಕ ಸಂಸ್ಥೆಯ ಮುಖ್ಯಸ್ಥರಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದರು. ಬಳಿಕ ಅವರನ್ನು ವೈದ್ಯರೊಬ್ಬರ ಮೂಲಕ ಸಂಸ್ಥೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಭಗಿನಿಯನ್ನು ಘಟನೆಯ ಬಗ್ಗೆ ವಿಚಾರಿಸಿದಾಗ ಆಘಾತದಿಂದಾಗಿ ಏನಾಗುತ್ತಿದೆ ಎಂಬ ಅರಿವೇ ಅವರಿಗೆ ಇಲ್ಲವಾಗಿರುವುದು ತಿಳಿದು ಬಂದಿದೆ.
ಬೊಬ್ಬೆ ಹಾಕುವುದಕ್ಕೂ ಅವರಿಂದ ಆಗಿಲ್ಲ. ಅವರ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆಯಾಗಿಲ್ಲ ಹಾಗೂ ಇತರ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಆಘಾತದಿಂದ ಅವರಿನ್ನೂ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ದರೋಡೆ ಕೃತ್ಯವಾಗಿ ಕಂಡು ಬರುತ್ತಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’’ ಎಂದು ಫಾ.ರುಡಾಲ್ಫ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಕ್ರೈಸ್ತ ಸನ್ಯಾಸಿನಿಯೋರ್ವ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದ ಬೆನ್ನಲ್ಲೇ, ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದ ಕೃತ್ಯ ಎಸಗಿರುವವರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ನಿನ್ನೆ ಮಧ್ಯಾಹ್ನ ಕೃತ್ಯ ನಡೆದಿದ್ದರೂ ಪೊಲೀಸರು ಪ್ರಕರಣ ದಾಖಲಿಸುವಾಗ ಸಂಜೆ 6 ಗಂಟೆಯಾಗಿರುವ ಬಗ್ಗೆ ಹಿರಿಯ ಕ್ರೈಸ್ತ ಪ್ರಮುಖರು ಹಾಗೂ ನಾಯಕರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಐಪಿಸಿ ಸೆಕ್ಷನ್ 392 (ದರೋಡೆ) ಮತ್ತು 363 (ಅಪಹರಣ)ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ದಾಖಲಿಸಲು ವಿಳಂಬದ ಬಗ್ಗೆ ಶಿಸ್ತು ಕ್ರಮ: ಡಿಸಿಪಿ
ಪ್ರಕರಣ ದಾಖಲಿಸುವ ಕುರಿತಂತೆ ಠಾಣಾ ಪೊಲೀಸರು ವಿಳಂಬ ತೋರಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ. ನಿನ್ನೆ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಭಗಿನಿ ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭ ಪಿಎಸ್‌ಐ ಹಾಗೂ ಇನ್ಸ್‌ಪೆಕ್ಟರ್ ಕರ್ತವ್ಯದ ನಿಮಿತ್ತ ಹೊರಹೋಗಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಮಹಿಳಾ ಎಎಸ್‌ಐ ದೂರು ನೀಡಲು ಬಂದವರಲ್ಲಿ ಏನೊಂದೂ ವಿಚಾರಿಸಲಿಲ್ಲ ಎಂಬ ದೂರು ಬಂದಿದೆ. ಮಾತ್ರವಲ್ಲದೆ ಎಎಸ್‌ಐಯವರು ಪ್ರಕರಣ ದಾಖಲಿಸಲು ಪಿಎಸ್ಸೈ ಬರುವವರೆಗೆ ಕಾದಿದ್ದರು. ಅದೊಂದು ಅಪಹರಣ ಮತ್ತು ದರೋಡೆ ಪ್ರಕರಣವಾಗಿದ್ದು, ಈ ರೀತಿ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಎಎಸ್‌ಐ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದೇವೆ. ಮಾತ್ರವಲ್ಲದೆ ಎಎಸ್‌ಐಗೂ ಕಾರಣ ಕೇಳಿ ನೋಟಿಸು ನೀಡಲಾಗಿದೆ ಎಂದು ಡಿಸಿಪಿ ಸಂತೋಷ್ ಪ್ರತಿಕ್ರಿಯಿಸಿದ್ದಾರೆ.
ಕ್ರೈಸ್ತ ಭಗಿನಿಯ ಅಪಹರಣ ಪ್ರಕರಣ: ಶಾಸಕ ಲೋಬೊರಿಂದ ಮುಖ್ಯಮಂತ್ರಿ ಭೇಟಿ
ಮಂಗಳೂರು ನಗರದಲ್ಲಿ ಕ್ರೈಸ್ತ ಭಗಿನಿಯೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆಗ್ರಹಿಸಿದ್ದಾರೆ.
ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಕರ್ನಾಟಕ ಕ್ರಿಶ್ಚಿಯನ್ ಅಸೋಸಿಯೇಶನ್ಸ್ (ಐಎಫ್‌ಕೆಸಿಎ)ನ ರಾಜ್ಯ ಸಂಚಾಲಕ ಡೆನಿಸ್ ಡಿಸಿಲ್ವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಶಾಸಕ ಲೋಬೊ, ಮಂಗಳೂರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಅದರಲ್ಲೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡಲಾಗುತ್ತಿರುವ ಕೋಮು ಸಂಘರ್ಷ ವಾತಾವರಣದ ಬಗ್ಗೆಯೂ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.
ಶಾಸಕರ ಮನವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಈ ಬಗ್ಗೆ ಗೃಹ ಸಚಿವ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸಾರ್ವಜನಿಕರಲ್ಲಿ ಅಸುರಕ್ಷತೆಯ ಭಾವನೆ ಸೃಷ್ಟಿ ಮಾಡಲು ಬಿಡುವುದಿಲ್ಲ. ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ದ.ಕ. ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.