ಮಂಗಳೂರು,ಮಾರ್ಚ್.17 ನಗರದ ನಂತೂರು ಸಮೀಪ ನಿಲ್ಲಿಸಿದ್ದ ಲಾರಿಯಲ್ಲಿ ಡಿ.20ರಂದು ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾದ ಪ್ರಕರಣ ಕೊಲೆ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಕದ್ರಿ ಠಾಣೆಯಲ್ಲಿ ದಾಖಲಾಗಿದ್ದ ಅನುಮಾನಾಸ್ಪದ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿ ಕೇಸು ದಾಖಲಿಸಲಾಗಿದೆ.
ರಾಜಸ್ಥಾನ ನೋಂದಣಿಯ ಫ್ಲೈವುಡ್ ಸಾಗಾಟದ ಲಾರಿ ಕೇರಳಕ್ಕೆ ತೆರಳಿ ಅಲ್ಲಿಂದ ಮರಳಿ ಬಂದು ನಗರದ ನಂತೂರು ಸಮೀಪದ ಹಿಮಾಲಯನ್ ಟ್ರಾನ್ಸ್‌ಪೋರ್ಟ್ ಕಚೇರಿ ಸಮೀಪ ತಪಾಸಣೆಗಾಗಿ ನಿಲ್ಲಿಸಲಾಗಿತ್ತು. ನಾಲ್ಕೈದು ದಿನಗಳಿಂದ ಲಾರಿ ಅಲ್ಲೇ ಇದ್ದು, ಡಿ.20ರಂದು ಸಂಜೆ ಲಾರಿಯಿಂದ ಕೊಳೆತ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಲಾರಿಯನ್ನು ತಪಾಸಣೆ ನಡೆಸಿದಾಗ ಅವರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಲಾರಿ ಚಾಲಕ ಪರಾರಿಯಾಗಿದ್ದ.
ಈ ಬಗ್ಗೆ ಸ್ಥಳೀಯರು ಕದ್ರಿ ಠಾಣೆಯ ಪೊಲೀಸರು ಬಂದು ತಪಾಸಣೆ ನಡೆಸಿ ಮೃತಪಟ್ಟ ವ್ಯಕ್ತಿಯನ್ನು ಲಾರಿಯ ಕ್ಲೀನರ್ ಅಶೋಕ್ (60) ಎಂದು ಗುರುತಿಸಿದ್ದರು. ಅಲ್ಲದೆ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ನಡುವೆ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು.
ಇದೀಗ ವೈದ್ಯಕೀಯ ವರದಿ ಬಂದ ಹಿನ್ನೆಲೆಯಲ್ಲಿ ಲಾರಿ ಚಾಲಕ ರೋತಾಸ ಎಂಬಾತ ಸಹ ಚಾಲಕ ಅಶೋಕನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಕೇಸು ಬದಲಾಯಿಸಿ ಮರು ದಾಖಲಿಸಲಾಗಿದೆ.