ಕನ್ನಡ ವಾರ್ತೆಗಳು

ಐಎಎಸ್ ಅಧಿಕಾರಿ ಡಿಕೆ.ರವಿ ನಿಗೂಢ ಸಾವು ಪ್ರಕರಣ : ಮರಣೋತ್ತರ ಪರೀಕ್ಷೆ ಅಂತ್ಯ

Pinterest LinkedIn Tumblr

Dk_ravi_photo

ಬೆಂಗಳೂರು,ಮಾರ್ಚ್.17: ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಸೋಮವಾರ ನಿಗೂಢವಾಗಿ ಮೃತಪಟ್ಟಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವೆಂಕಟರಾಘವ ನೇತೃತ್ವದಲ್ಲಿ ಆಸ್ಪತ್ರೆಯ ಶವಾಗಾರದಲ್ಲಿ ರವಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖಾಧಿಕಾರಿಗಳಾದ ರೋಹಿಣಿ ಕಟೋಚ್, ಎಸಿ ನಾಗರಾಜ್, ಮಡಿವಾಳ ಠಾಣೆ ಇನ್ಸ್ ಪೆಕ್ಟರ್ ನಾಗಾರಾಜ್ ಉಪಸ್ಥಿತಿರಿದ್ದು, ಪೊಲೀಸ್ ಅಧಿಕಾರಿಗಳು ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಭೂಗಳ್ಳರಿಗೆ ಚಳಿ ಬಿಡಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಸೋಮವಾರ ಸಂಜೆ 7.30ರ ಸುಮಾರಿಗೆ ಸೇಂಟ್ ಜಾನ್ ಆಸ್ಪತ್ರೆ ಸಮೀಪದ ಸೆಂಟ್ ಜಾನ್ಸ್ ಹುಡ್ ಅಪಾರ್ಟ್ ಮೆಂಟ್ ನಲ್ಲಿ ರವಿ ನೇಣಿಗೆ ಶರಣಾಗಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ, ಅವರ ಸಾವಿನ ಸುತ್ತ ನೂರಾರು ಅನುಮಾನಗಳು ಹುಟ್ಟಿಕೊಂಡಿವೆ. ಭೂಗಳ್ಳರು ಮತ್ತು ತೆರೆಗೆಗಳ್ಳರ ಗೃಹ ಶೋಧ ಮಾಡಿದ್ದೇ ಅವರ ಅಂತ್ಯಕ್ಕೆ ಕಾರಣವಾಯ್ತೆ ಎಂಬ ಸಂಶಯ ಎಲ್ಲೆಡೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಅವರಿಗೆ ದುಬೈನಿಂದಲೂ ಬೆದರಿಕೆ ಕರೆ ಬಂದಿತ್ತು. ಮಾತ್ರವಲ್ಲ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ವೇಗ ಕಡಿಮೆ ಮಾಡುವಂತೆಯೂ ಅವರಿಗೆ ಒತ್ತಡಗಳಿತ್ತು. ಆದರೆ ಈ ಒತ್ತಡಕ್ಕೆ ಮಣಿದು ರವಿ ಸಾವಿಗೆ ಶರಣಾದರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಆದರೆ ಇನ್ನೊಂದು ಮೂಲಗಳ ಪ್ರಕಾರ ಬೆಳಗ್ಗೆ ಅಪಾರ್ಟ್ ಮೆಂಟ್ ನಿಂದ ಗಂಡ ಹೆಂಡತಿ ಪ್ರತ್ಯೇಕವಾಗಿ ಹೊರಹೋಗಿದ್ದರು ಎನ್ನಲಾಗಿದ್ದು, ರವಿ ಅವರು ಮಾತ್ರ ಕೊಂಚ ಹೊತ್ತಿನ ನಂತರ ಮರಳಿ ಬಂದಿದ್ದರು ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಎಲ್ಲ ಕೋನಗಳಿಂದ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

Write A Comment