ಮಂಗಳೂರು, ಮಾರ್ಚ್.17: ಉಳ್ಳಾಲ ಸಮುದ್ರ ತೀರದಲ್ಲಿ ಅಶ್ಲೀಲವಾಗಿ ವರ್ತಿಸುತಿದ್ದ ಭಿನ್ನ ಕೋಮಿನ ಜೋಡಿಗಳನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಉಳ್ಳಾಲ ಮೊಗವೀರ ಪಟ್ಣ ಬಳಿ ಸೋಮವಾರ ಸಂಜೆ ನಡೆದಿದೆ.
ಕುದ್ರೋಳಿ ನಿವಾಸಿ ರೊಹರಾ ಅವರ ಪುತ್ರ ಉಬೈದುಲ್ಲಾ(20) ಮತ್ತು ವಾಮಂಜೂರು ಮೂಡುಶೆಡ್ಡೆ ನಿವಾಸಿ ಹಿಂದೂ ಯುವತಿ ಇಬ್ಬರು ಸೋಮವಾರ ಸಂಜೆ ಉಳ್ಳಾಲ ಸಮುದ್ರ ತೀರದಲ್ಲಿ ಸಾರ್ವಜನಿಕ ಸ್ಥಳಾದಲ್ಲಿ ಸರಸಸಲ್ಲಪದಲ್ಲಿ ತೊಡಗಿರುವಾಗ ಸ್ಥಳೀಯರು ಬಂದು ಇವರ ಬಗ್ಗೆ ವಿಚಾರಿಸಿದಾಗ ಯುವಕ ಉಡಾಫೆಯ ಉತ್ತರ ನೀಡಿದ. ಯುವಕನನ್ನು ಮತಷ್ಟು ವಿಚಾರಿಸಿದಾಗ ಇಬ್ಬರೂ ಭಿನ್ನ ಕೋಮಿನವರೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇವರಿಬ್ಬರೂ ಉಳ್ಳಾಲದ ಮೊಗವೀರ ಪಟ್ಣದ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಯಾಕ್ಟೀವಾ ಸ್ಕೂಟರಿನಲ್ಲಿ ಬಂದಿದ್ದರು. ಯುವಕನ ಬಂಧನದ ಸುದ್ಧಿ ತಿಳಿಯುತ್ತಿದ್ದಂತೆ ಈ ಮೊದಲೇ ಹೃದಯರೋಗಿಯಾಗಿದ್ದ, ಯುವಕನ ತಾಯಿ ಜೊಹರಾ (41) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುದ್ರೋಳಿ ಜಾಮಿಯಾ ಮಸೀದಿ ಸಮೀಪದ ನಿವಾಸಿ ಜೊಹರಾ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ರೊಹರಾ ಅವರ ಪತಿ ಶಾರ್ಜಾದಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಯುವತಿ ಜೊತೆ ಸರಸ ಸಲ್ಲಪದಲ್ಲಿ ತೊಡಗಿದ್ದ ಉಬೈದುಲ್ಲಾನಿಗೆ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ತೀರಾ ಹೆದರಿದ್ದ ಉಬೈದುಲ್ಲಾ ಆರೋಪಿಗಳ ಹೆಸರು ಹೇಳಲು ಮತ್ತು ದೂರು ನೀಡಲು ಹಿಂಜರಿಯುತ್ತಿದ್ದ. ಈ ವೇಳೆ ಉಳ್ಳಾಲ ಠಾಣಾ ಎಸ್ಸೈ ಭಾರತಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಸವಿತ್ರ ತೇಜ್ ಆರೋಪಿಗಳನ್ನು ಬಂಧಿಸುವ ಬಗ್ಗೆ ಭರವಸೆ ನೀಡಿದರಲ್ಲದೆ, ಆತನಲ್ಲಿ ಧೈರ್ಯ ತುಂಬಿ ಆತನಿಂದ ಲಿಖಿತ ದೂರು ದಾಖಲಿಸಿಕೊಂಡಿದ್ದಾರೆ. ಬಳಿಕ ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಉಬೈದುಲ್ಲಾನನ್ನು ಉಳ್ಳಾಲ ಪೊಲೀಸರು ಮಂಗಳೂರಿನ ಠಾಣೆಯೊಂದಕ್ಕೆ ಕದೊಯ್ದಿದ್ದಾರೆ.
ಜೀವವನ್ನೇ ಬಲಿ ಪಡೆದ ದೂರವಾಣಿ ಕರೆ :
‘‘ಉಳ್ಳಾಲ ಬೀಚ್‌ಗೆ ತೆರಳಿದ್ದ ನಿಮ್ಮ ಮಗನ ಮೇಲೆ ಕೆಲವರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ನೀವೊಮ್ಮೆ ಠಾಣೆಗೆ ಬನ್ನಿ’’ ಎಂದು ಸಂಜೆ ಮಂಗಳೂರಿನ ಪೊಲೀಸ್ ಠಾಣೆಯೊಂದರಿಂದ ಉಬೈದುಲ್ಲಾನ ತಾಯಿ ರೊಹರಾರಿಗೆ ಬಂದ ಕರೆ ಆಕೆಯ ಜೀವವನ್ನೇ ಬಲಿ ಪಡೆದಿದೆ. ತನ್ನ ಮಗನ ಮೇಲಿನ ಗಂಭೀರ ಹಲ್ಲೆಯಿಂದ ಆತಂಕಕ್ಕೀಡಾದ ರೊಹರಾ ಆಟೊ ರಿಕ್ಷಾವೊಂದರಲ್ಲಿ ಮನೆಯಿಂದ ಹೊರಟಿದ್ದರು. ಠಾಣೆಗೆ ಹೊರಡುವ ದಾರಿಮಧ್ಯೆ ಅವರಿಗೆ ತೀವ್ರ ಹೃದಯಾಘಾತವಾಗಿದೆ ಎನ್ನಲಾಗಿದ್ದೆ. ಈ ಸಂದರ್ಭದಲ್ಲಿ ಆಟೊ ಚಾಲಕ ಕೆಲವರ ಸಹಾಯದಿಂದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.