ಮಂಗಳೂರು,ಮಾರ್ಚ್.17 : ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅಪಹರಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ಸಂದರ್ಭ ಆರೋಪಿ ಯುವಕ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಮುಂಜಾನೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪ್ರಕರಣದ ಆರೋಪಿ ಯುವಕ ರಾಜೇಶ್ ಮತ್ತು ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಠಾಣೆಯ ಎಎಸ್‌ಐ ಯು.ಆರ್.ಡಿಸೋಜ ಮತ್ತು ಸಿಬ್ಬಂದಿ ಠಾಣೆಗೆ ಹಾಜರುಪಡಿಸಿದ್ದು, ಬಾಲಕಿ ಅಪ್ರಾಪ್ತಳಾಗಿರುವುದರಿಂದ ಆಕೆಯನ್ನು ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಬಾಲಕಿಯನ್ನು ಅಪಹರಣ ಮಾಡಿದ ಆರೋಪಿ ರಾಜೇಶ್‌ನನ್ನು ಭಾನುವಾರ ಮುಂಜಾನೆ 3.15ರ ಸುಮಾರಿಗೆ ಠಾಣೆಯಲ್ಲಿ ವಿಚಾರಣೆ ನಡೆಸಲು ಆರಂಭಿಸಲಾಗಿತ್ತು. ಈ ಸಂದರ್ಭ ಸಿಬ್ಬಂದಿಯ ವಾಕಿಟಾಕಿ ಕೆಳಗೆ ಬಿದ್ದ ಸಂದರ್ಭ ಅದನ್ನು ತೆಗೆಯಲು ಬಗ್ಗಿದಾಗ ಯುವಕ ತನ್ನ ಬ್ಯಾಗ್‌ನಲ್ಲಿ ತಂದಿದ್ದ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆರೋಪಿ ರಾಜೇಶ್ ಮತ್ತು ಅಪ್ರಾಪ್ತ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಅವರ ಎರಡೂ ಕಡೆಯ ಮನೆಯವರ ಒಪ್ಪಿಗೆಯಿಲ್ಲದೇ ಇದ್ದುದರಿಂದ ಅವರಿಬ್ಬರು ಆತ್ಮಹತ್ಯೆ ಮಾಡಲು ನಿರ್ಧರಿಸಿ ಈ ಬಗ್ಗೆ ಮಾ.9ರಂದು ಒಂದು ಡೆತ್‌ನೋಟ್ ಬರೆದಿಟ್ಟಿದ್ದರು. ಅಲ್ಲದೆ ಆತ್ಮ,ಹತ್ಯೆ ಮಾಡುವ ಉದ್ದೇಶದಿಂದ ಮೊದಲೇ ವಿಷ ಪದಾರ್ಥವನ್ನು ಖರೀದಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.
ರಾಜೇಶ್‌ನ ಮೇಲೆ ಪೊಲೀಸ್ ಕೇಸ್ ಆಗಿರುವುದರಿಂದ ಜೈಲು ಶಿಕ್ಷೆ ಆಗಬಹುದು ಎಂಬ ಭಯದಿಂದ ಪೊಲೀಸ್ ವಿಚಾರಣೆ ಸಂದರ್ಭ ವಿಷ ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್‌ನನ್ನು ಕೂಡಲೇ ಚಿಕಿತ್ಸೆ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕ ಚೇತರಿಸಿಕೊಂಡಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.