ಮೂಲ್ಕಿ, ಮಾ.12: ಕಳೆದ ಒಂದು ವಾರದಿಂದ ನಿರಂತರವಾಗಿ ಅಪಘಾತದ ವಲಯವಾಗಿ ಗುರುತಿಸಿಕೊಳ್ಳುತ್ತಿರುವ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕಾರ್ನಾಡು ಬೈಪಾಸ್ ಬಳಿ ಬುಧವಾರ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುದರಿಂದ ಕೆಲಕಾಲ ಸಂಚಾರ ವ್ಯತ್ಯಯ ಕಂಡು ಬಂದಿತು.
ಉಡುಪಿಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಿಟ್ಜ್ ಕಾರೊಂದಕ್ಕೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಫಿಯೆಟ್ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರಿನ ಚಾಲಕರು ಗಾಯಗೊಂಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು ಎರಡೂ ಕಾರನ್ನು ಬೇರ್ಪಡಿಸಿದ ನಂತರ ಸಂಚಾರ ಸುಗಮಗೊಂಡಿತ್ತು.
ಸೂಚನಾ ಫಲಕವೇ ಇಲ್ಲ!
ಚತುಷ್ಪಥ ರಸ್ತೆಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಏಕಮುಖ ರಸ್ತೆಯನ್ನಾಗಿ ಮಾಡಲಾಗಿದ್ದು ಯಾವುದೇ ಸೂಚನಾ ಫಲಕ ಇಲ್ಲದೇ ಇರುವುದರಿಂದ ಇಂತಹ ದುರ್ಘಟನೆಗಳು ನಿತ್ಯವೂ ಸಂಭವಿಸುತ್ತಿದೆ ಎಂದು ಸ್ಥಳಿಯ ರಿಕ್ಷಾ ಚಾಲಕರು ಆರೋಪಿಸಿ, ಅಪಘಾತದ ಸರಮಾಲೆಗಳು ನಡೆಯುತ್ತಿದ್ದರು ಪೊಲೀಸರಾಗಲಿ, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಾಗಲಿ ನಿರ್ಲಕ್ಷ ಧೋರಣೆ ಅನುಸರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನರೇಂದ್ರ ಕೆರೆಕಾಡು_