ಮಂಗಳೂರು : ಕರಾವಳಿಯಲ್ಲಿ ಸಂಚಲನ ಮೂಡಿಸಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಮನ ತಲುಪಿರುವ ಕರಾವಳಿಯ ಜನಪ್ರಿಯ ವಾಹಿನಿ `ನಮ್ಮ ಟಿವಿ’ ವಾಹಿನಿಯು ಬುಧವಾರ ಹತ್ತನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿತು.
`ನಮ್ಮ ಟಿವಿ’ ವಾಹಿನಿಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ ಅವರ ನೇತ್ರತ್ವದಲ್ಲಿ ಕುಳಾಯಿಯಲ್ಲಿರುವ ನಮ್ಮ ಟಿವಿ ಸ್ಟುಡಿಯೋದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಂದ ಅತಿಥಿಗಳಲ್ಲರು ಸಂಭ್ರಮ ಆಚರಿಸಿದರು. ಬಂದ ಅತಿಥಿಗಳ, ಹಿತೈಷಿಗಳ ಮುಂದೆ ಕೇಕ್ ಕತ್ತರಿಸಿ ಎಲ್ಲರಿಗೂ ಕೇಕ್ ಹಂಚಿದ ಡಾ.ಶಿವಶರಣ್ ಶೆಟ್ಟಿ ಅವರು ತಮ್ಮನ್ನು ಅಭಿನಂದಿಸಲು ಬಂದವರಿಗೆ ಕೇಕ್ ತಿನ್ನಿಸಿ ಸಂಭ್ರಮ ಪಟ್ಟರು.
ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ನಾಯಕರು, ಕೇಬಲ್ ನೆಟ್ ವರ್ಕ್ ಜಾಲದ ಮಾಲೀಕರು, ಕಲಾವಿದರು, ಶಿಕ್ಷಣ ಕ್ಷೇತ್ರದ ಮುಖ್ಯಸ್ಥರು, ಉದ್ಯಮಿಗಳು ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಹಲವಾರು ಪ್ರಮುಖರು ನಮ್ಮ ಟಿ.ವಿ ಸ್ಟುಡಿಯೋಗೆ ಬಂದು ನಮ್ಮ ಟಿವಿಗೆ ಶುಭಾ ಹಾರೈಸಿ, ಡಾ.ಶಿವಶರಣ್ ಶೆಟ್ಟಿ ಅವರನ್ನು ಅಭಿನಂದಿಸಿದರು. ಮಾತ್ರವಲ್ಲದೇ ಸ್ವತ: ಡಾ.ಶಿವಶರಣ್ ಶೆಟ್ಟಿ ಅವರೇ ಬಂದ ಅತಿಥಿಗಳಿಗೆ ಸ್ಮರಣಿಕೆಗಳನ್ನು ಕೊಟ್ಟು ದಶಮಾನೋತ್ಸವ ಸಮಾರಂಭ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ಜೊತೆಗೆ ಈ ಕಾರ್ಯಕ್ರಮವನ್ನು ನಮ್ಮ ಟಿ.ವಿ ವೀಕ್ಷಕರು ನೋಡ ಬೇಕೆನ್ನುವ ಧ್ಯೇಯದಿಂದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಕೂಡ ಮಾಡಿದ್ದರು.
ಕರಾವಳಿಯ ಜನತೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿ…
ಕಳೆದ ಹತ್ತು ವರ್ಷಗಳಿಂದ ನಮ್ಮ ಕರಾವಳಿಯ, ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಟಿವಿ ಮುಂಚೂಣಿಯಲ್ಲಿದ್ದು ಕೊಂಡು,ಅನೇಕ ಮಂದಿ ಕಲಾವಿದರಿಗೆ ವೇದಿಕೆಯಾಗಿ, ನಿರೂಪಕರಿಗೆ ಧ್ವನಿಯಾಗಿ, ನೋಡುಗರಿಗೆ ಕನ್ನಡಿಯಾಗಿ ಬೆಳೆದಿದೆ, ಇತರರನ್ನೂ ಬೆಳೆಸಿದೆ. ಈ ಮಟ್ಟಿಗೆ ನಮ್ಮ ಟಿ.ವಿ ತನ್ನ ಹತ್ತು ವರ್ಷಗಳ ಸೇವೆಯನ್ನು ಹತ್ತು ಹಲವಾರು ವಿಶೇಷತೆಗಳೊಂದಿಗೆ ಬೆಳೆದು, ಎಲ್ಲರ ಮನೆ, ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
`ನಮ್ಮ ಟಿವಿ’ ವಾಹಿನಿಯು ಹತ್ತನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಈ ಸುಸಂದರ್ಭದಲ್ಲಿ ತನ್ನದೇ ಆದ ವಿಶೇಷ ವರದಿಗಳ ಮೂಲಕ ದುಬೈ ಮಾತ್ರವಲ್ಲದೇ ವಿದೇಶಗಳಲ್ಲಿ ಹಾಗೂ ಭಾರತದಲ್ಲಿ ಹೆಸರುವಾಸಿಯಾಗಿರುವ ಸುದ್ಧಿ ತಾಣ “ಕನ್ನಡಿಗ ವರ್ಲ್ಡ್” ಅಂತಾರ್ಜಾಲ ತಾಣವು `ನಮ್ಮ ಟಿವಿ’ ವಾಹಿನಿಯ ಮುಖ್ಯಸ್ಥರಾದ ಡಾ.ಶಿವಶರಣ್ ಶೆಟ್ಟಿ ಹಾಗೂ ಸಂಸ್ಥೆಯ ಬಳಗಕ್ಕೆ ಹಾರ್ಧೀಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.










