ಮಂಗಳೂರು,ಮಾರ್ಚ್.09 : ಮಹಿಳೆಯರ ಸಬಲೀಕರಣದ ಬಗ್ಗೆ ಚರ್ಚಿಸುವ ಸಂದರ್ಭ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಬಗ್ಗೆಯೂ ಅಲೋಚಿಸುವುದು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಮತ್ತು ದ. ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ವಿಶ್ವ ಮಹಿಳಾ ದಿನಾಚರಣೆ ಮತ್ತು ಜಿಲ್ಲಾ ಸ್ತ್ರೀಶಕ್ತಿ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರಿಗೆ ಅವಕಾಶ ನೀಡಿದಾಗ ಅವರು ಪುರುಷರಿಗಿಂತ ಹೆಚ್ಚು ಸಮರ್ಥರಾಗಿ ಹಾಗೂ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸುವುದನ್ನು ನಾವು ಕಂಡಿದ್ದೇವೆ. ಅವರು ಗೌರವ ಹಾಗೂ ಇತರ ದೃಷ್ಟಿಕೋನ ಇಟ್ಟುಕೊಂಡು ಹೆಚ್ಚು ಪ್ರಾಮಾಣಿಕರಾಗಿ ಸೇವೆ ನೀಡುತ್ತಾರೆ. ಹೆಣ್ಣು ಮಕ್ಕಳಿಗೆ ಮೀಸಲಾತಿ ಮೂಲಕ ಸಾಮಾಜಿಕವಾಗಿ ಮುಂದೆ ಬರುವ ಅವಕಾಶವನ್ನು ನೀಡಲಾಗಿದೆ. ಮಹಿಳೆಯರು ಅವಕಾಶ ಸಿಕ್ಕ್ಕಿದಾಗ ಅತ್ಯುತ್ತಮ ಆಡಳಿತಗಾರರಾಗುತ್ತಾರೆ ಎಂಬುದಕ್ಕೆ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಸಾಕ್ಷಿಯಾಗಿದ್ದಾರೆ ಎಂದರು.
ಶಾಸಕ ಜೆ.ಆರ್. ಲೋಬೋ ಮಾತನಾಡಿ, ಇಡೀ ದೇಶದಲ್ಲಿ ಪುರುಷರಿಗೆ ಸಿಗುವಷ್ಟೇ ಸಮಾನ ಅವಕಾಶ ಮಹಿಳೆಯರಿಗೆ ಸಿಗಬೇಕು. ಮಹಿಳೆಯರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ಜತೆಗೆ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅವರ ವಿರುದ್ಧದ ಶೋಷಣೆ, ದೌರ್ಜನ್ಯ ನಿಲ್ಲುವಂತಾಗಬೇಕು. ಮುಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ದೊಡ್ಡ ಮಟ್ಟದ ಜಾಥಾ ಮಾಡಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮಹಿಳೆಯರ ಹಕ್ಕುಗಳ ಪರವಾದ ಹೋರಾಟಗಳು ನಡೆಯುತ್ತಿರಬೇಕು. ರಾಜಕೀಯ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರ ಸೇವೆ ಅಮೋಘವಾದುದು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಮಹಿಳೆಯರಿಗಾಗಿ ರೂಪಿಸಿರುವ ಕಾನೂನುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಮಾತನಾಡಿ, ಈ ಕಾರ್ಯಕ್ರಮಕ್ಕೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಂಡಾಗ, ಈ ಕಾರ್ಯಕ್ರಮ ಅಪ್ರಸ್ತುತವೋ ಎಂಬಂತೆ ಭಾಸವಾಗುತ್ತದೆ. ಹೆಣ್ಣು ಮಕ್ಕಳ ಶೋಷಣೆ, ಭ್ರೂಣ ಹತ್ಯೆ, ಬಾಲ್ಯ ವಿವಾಹ ಮುಂತಾದ ನಾನಾ ಸಮಸ್ಯೆಗಳು ನಮ್ಮ ನಡುವೆ ಇವೆ. ಇದಕ್ಕಾಗಿ ಮಾನಸಿಕ ಬದಲಾವಣೆ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಮೊದಲು ನಗರದ ಕೆಎಸ್‌ಆರ್‌ಟಿಸಿ ಸಮೀಪ ನಿರ್ಮಿಸಲಾದ ಜಿಲ್ಲಾ ಸ್ತ್ರೀ ಶಕ್ತಿ ಭವನದ ಉದ್ಘಾಟನೆಯನ್ನು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಫಿಲೋಮಿನಾ ನೆರವೇರಿಸಿದರು. ಇದೇ ಸಂದರ್ಭ ಸ್ತ್ರೀ ಶಕ್ತಿ ಭವನ ನಿರ್ಮಿಸಿರುವ ಗುತ್ತಿಗೆದಾರರಾದ ಗಿರಿಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ದ.ಕ. ಜಿಲ್ಲಾ ಮಹಿಳಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಫ್ಸಿಭಾ ರಾಣಿ ಕೊರ್ಲಪತಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗರ್ಟ್ರೂಡ್ ವೇಗಸ್ ಸ್ವಾಗತಿಸಿದರು. ಸುಂದರ ಪೂಜಾರಿ ವಂದಿಸಿದರು.


