ಬೆಂಗಳೂರು, ಫೆ. 25 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂಟು ಗಣಿ ಕಂಪನಿಗಳ ಪರವಾನಿಗೆ ನವೀಕರಣಕ್ಕೆ ಶಿಫಾರಸ್ಸು ಮಾಡುವುದರ ಮೂಲಕ ಅಕ್ರಮ ಗಣಿಗಾರಿಕೆ ವಿರುದ್ಧ ತಾವು ನಡೆಸಿದ ಹೋರಾಟಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅಕ್ರಮ ಗಣಿಗಾರಿಕೆ ಕುರಿತು ಅಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ನೀಡಿದ ವರದಿಯ ಅನ್ವಯ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಆರೋಪಿತ ಗಣಿ ಕಂಪನಿಗಳ ಲೈಸೆನ್ಸ್ ನವೀಕರಣಕ್ಕೆ ಶಿಫಾರಸ್ಸು ಮಾಡುವುದರ ಮತ್ತೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಮುಂದಾಗಿದೆ ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 597 ಗಣಿ ಕಂಪನಿಗಳು ಪರವಾನಿಗೆಯನ್ನು ಹೊಂದಿದ್ದು, ಸುಮಾರು 51,241 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ರೀತಿಯ ಗಣಿಗಾರಿಕೆಗಳನ್ನು ನಡೆಸುತ್ತಿವೆ. ಇದರಲ್ಲಿ ಸುಮಾರು 16,688 ಹೆಕ್ಟೇರ್ ಪ್ರದೇಶವು ಅರಣ್ಯ ಇಲಾಖೆಗೆ ಸೇರಿರುತ್ತದೆ. 10 ವರ್ಷಗಳ ಹಿಂದೆ ಗಣಿ ಇಲಾಖೆಯಿಂದ ರಾಯಲ್ಟಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಸುಮಾರು 50 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹವಾಗುತ್ತಿತ್ತು.
ಪ್ರಸ್ತುತ ಸುಮಾರು 475 ಕೋಟಿ ರೂಪಾಯಿಗಳ ರಾಜ್ಯಸ್ವ ರಾಜ್ಯ ಸರ್ಕಾರಕ್ಕೆ ಬರುತ್ತಿದೆ. ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವಂತಹ ಖನಿಜ ವಸ್ತುಗಳಿಗೆ ರಾಜ್ಯ ಸರ್ಕಾರವು ರಾಯಲ್ಟಿಯನ್ನು ಮರುಪರಿಶೀಲನೆ ಮಾಡಿದರೆ ವಾರ್ಷಿಕ ಸುಮಾರು 3 ಸಾವಿರ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಕ್ಕೆ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ. ಸಾವಿರಾರು ಅರ್ಜಿಗಳು ಗಣಿಗಾರಿಕೆಗಾಗಿ ಸಲ್ಲಿಕೆಯಾಗಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮದಡಿಯಲ್ಲಿ ಗಣಿಗಾರಿಕೆಗಳು ಹಂಚಿಕೆಯಾಗಬೇಕು. ಈ ಕಾಯ್ದೆಯಡಿಯಲ್ಲಿ ನವೀಕರಣದ ಅರ್ಜಿಗಳನ್ನು ಶಿಫಾರಸ್ಸು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಮೈನಿಂಗ್ ಲೀಸ್ ಪಡೆದು ಮೂವತ್ತು ವರ್ಷಗಳನ್ನು ಪೂರ್ಣಗೊಳಿಸಿರುವ ಗಣಿ ಕಂಪನಿಗಳ ಅರ್ಜಿಗಳನ್ನು ನವೀಕರಣ ಮಾಡಬಹುದು.
ಸದ್ಯ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಿರುವ 8 ಕಂಪನಿಗಳು ಗಣಿಗಾರಿಕೆಯ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಗುರುತರವಾದ ಆರೋಪವನ್ನು ಎದುರಿಸುತ್ತಿವೆ. ಅನುಮತಿಯಿಲ್ಲದೆ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದ ಆರೋಪ, ಸುಳ್ಳು ಮಾಹಿತಿ ನೀಡಿ ಅದಿರು ರಫ್ತು ಮಾಡಿದ ಆರೋಪ ಎದುರಿಸುತ್ತಿವೆ. ಆದರೆ ಇವುಗಳಿಗೆ ಅವಕಾಶ ನೀಡಿರುವುದು ಭ್ರಷ್ಟಾಚಾರದ ಅನುಮಾನಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಅಯ್ಕೆಮಾಡಿದ ಕೆಲವೇ ಕಂಪನಿಗಳಿಗೆ ಶಿಫಾರಸ್ಸು ಮಾಡುವುದರ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿರುತ್ತಾರೆ. ಆತುರ ಆತುರವಾಗಿ ಎಂಟು ಕಂಪನಿಗಳನ್ನು ನವೀಕರಣಕ್ಕೆ ಶಿಫಾರಸ್ಸು ಮಾಡುವುದರ ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಮತ್ತೆ ತಲೆ ಎತ್ತಲು ರಾಜ್ಯ ಸರ್ಕಾರ ಹಸಿರು ನಿಶಾನೆಯನ್ನು ನೀಡಿರುತ್ತದೆ ಎಂದು ಆರೋಪಿಸಿದ್ದಾರೆ.