ದುಬೈ, ಫೆ.25: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ಅನಿವಾಸಿ ಭಾರತೀಯರ ಘಟಕವಾದ ಇಂಡಿಯನ್ ಕಲ್ಚರಲ್ ಸೊಸೈಟಿಯ ಕರ್ನಾಟಕ ವಿಭಾಗದ ವತಿಯಿಂದ ಇತ್ತೀಚೆಗೆ ದುಬೈಯ ಜೋರ್ಡಾನ್ ಕ್ಲಬ್‌ನಲ್ಲಿ “ಪ್ರಸಕ್ತ ಭಾರತ ಮತ್ತು ಪರ್ಯಾಯ ರಾಜಕಾರಣ” ಕುರಿತ ವಿಚಾರಸಂಕಿರಣವನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಭಾರತೀಯರು ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ವ್ಯವಸ್ಥೆಯನ್ನು ಬಲಪಡಿಸಲು ಜಾತಿ, ಧರ್ಮ, ವ್ಯತ್ಯಾಸಗಳನ್ನು ಬಿಟ್ಟು ಒಗ್ಗಟ್ಟಾಗಬೇಕು. ಕೋಮುವಾದಿ ಶಕ್ತಿಗಳು ಮತಗಳನ್ನು ಧುವೀಕರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೋಮುವಾದಿ ಶಕ್ತಿಗಳು ಧರ್ಮ- ಧರ್ಮಗಳ ನಡುವೆ ಸುಳ್ಳು ವದಂತಿ, ದ್ವೇಷ ಹರಡುವ ಮೂಲಕ ಜಾತ್ಯತೀತ ಸಿದ್ಧಾಂತವನ್ನು ನಾಶಪಡಿಸಲು ಪ್ರಯತ್ನಿಸುತ್ತಿವೆ. ಕೋಮುವಾದಿ ಶಕ್ತಿಗಳ ನಿಯಂತ್ರಿಸುವ ಕುರಿತು ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪರ್ಯಾಯ ರಾಜಕಾರಣ ಅಗತ್ಯವಿದೆ ಎಂದು ಹೇಳಿದರು.
ಪರ್ಯಾಯ ರಾಜಕಾರಣದಿಂದ ಮಾತ್ರ ದೇಶದಲ್ಲಿ ಹೆಡೆಬಿಚ್ಚುತ್ತಿರುವ ಕೋಮುವಾದವನ್ನು ಮಟ್ಟಹಾಕಲು ಸಾಧ್ಯ. ದೇಶದ ಸರ್ವತೋಮುಖ ಅಭಿವೃದ್ಧಿ ಕೂಡ ಪರ್ಯಾಯ ರಾಜಕಾರಣದಿಂದ ಸಾಧ್ಯ ಎಂದು ಹೇಳಿದ ಅವರು, ಈಗಾಗಲೇ ದೇಶದ ಜನರು ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ಭ್ರಮನಿರಸನಗೊಂಡಿದ್ದು, ಅವುಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ದೇಶದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗು ತುಳಿತಕ್ಕೊಳಗಾದವರ ಅಭಿವೃದ್ಧಿ ದೃಷ್ಟಿಯಿಂದ ಪರ್ಯಾಯ ರಾಜಕಾರಣಕ್ಕೆ ಎಸ್‌ಡಿಪಿಐ ಅತ್ಯುತ್ತಮ ಆಯ್ಕೆಯಾಗಿದೆ. ದೇಶ “ಹಸಿವು ಹಾಗೂ ಭಯ ಮುಕ್ತಗೊಳ್ಳಬೇಕು” ಎಂಬ ಧ್ಯೇಯವನ್ನಿಟ್ಟುಕೊಂಡು ಪಕ್ಷ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇಂಡಿಯನ್ ಕಲ್ಚರಲ್ ಸೊಸೈಟಿ ಅಧ್ಯಕ್ಷ ನಾಸಿರ್ ಕಾರಜೆ ಕಾರ್ಯಕ್ರಮ ಉದ್ಘಾಟಿಸಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ಅನಿವಾಸಿ ಭಾರತೀಯರಿಗೂ ಮತದಾನದ ಹಕ್ಕು ನೀಡುವಂತೆ ಆದೇಶ ನೀಡಿರುವುದನ್ನು ಸ್ವಾಗತಿಸಿದ ಅವರು, ಕೂಡಲೇ ಎಲ್ಲಾ ಅನಿವಾಸಿ ಭಾರತೀಯರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು. ಕರ್ನಾಟಕ ಚುನಾವಣಾ ಆಯೋಗಕ್ಕೆ ಮತದಾರರ ಹೆಸರು ನೋಂದಾವನಾ ಕಾರ್ಯಕ್ಕೆ ಆದಷ್ಟು ಬೇಗ ಚಾಲನೆ ನೀಡುವಂತೆ ಮನವಿ ಮಾಡಿರುವುದನ್ನು ನೆನಪಿಸಿಕೊಂಡರು.
ಇಂಡಿಯನ್ ಕಲ್ಚರಲ್ ಸೊಸೈಟಿಯ ಮುಖಂಡ ಹಸನ್ ಮುಖ್ಯ ಅತಿಥಿ ಮುಹಮ್ಮದ್ ಇಲ್ಯಾಸ್ ತುಂಬೆ ಅವರಿಗೆ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಎಸ್‌ಡಿಪಿಐ ಮತ್ತು ಇಂಡಿಯನ್ ಕಲ್ಚರಲ್ ಸೊಸೈಟಿ ಪದಾಧಿಕಾರಿಗಳು, ಬೆಂಬಲಿಗರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಇಂಡಿಯನ್ ಕಲ್ಚರಲ್ ಸೊಸೈಟಿನ ಕರ್ನಾಟಕ ಘಟಕದ ಉಪಾಧ್ಯಕ್ಷ ರಝಾಕ್ ಸುಭಾನ್ ಉಚ್ಚಿಲ, ತಮಿಳುನಾಡು ಘಟಕದ ಅಧ್ಯಕ್ಷ ನೀಲಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹಮೀದ್ ಸಾವಣೂರು, ಅಶ್ಫಾಕ್ ಮೈಸೂರು, ಅಬ್ಬಾಸ್ ಬಂಟ್ವಾಳ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಸಂಘಟನೆಯ ದೆಯಿರಾ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರು ಸ್ವಾಗತಿಸಿದರು. ಇರ್ಫಾನ್ ಯರ್ಮಾಳ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಆರಿಫ್ ಮಕಿಕೇರಿ ವಂದಿಸಿದರು.