ಕನ್ನಡ ವಾರ್ತೆಗಳು

ಭೂಸ್ವಾಧೀನ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ಅಣ್ಣಾ ಹಜಾರೆ ಹೋರಾಟಕ್ಕೆ ಉಡುಪಿ ಜಿಲ್ಲಾ ರೈತ ಸಂಘದ ಬೆಂಬಲ; ಕೆ.ಪ್ರತಾಪ್‌ಚಂದ್ರ ಶೆಟ್ಟಿ

Pinterest LinkedIn Tumblr

pratap-chandra-shetty-mlc

ಕುಂದಾಪುರ: ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್-ಮಂತರ್‌ನಲ್ಲಿ ಹೋರಾಟ ಪ್ರಾರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಹೋರಾಟ ಹಾಗೂ ನಿಲುವನ್ನು ಉಡುಪಿ ಜಿಲ್ಲಾ ರೈತ ಸಂಘ ಬೆಂಬಲಿಸುವುದಾಗಿ, ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2013 ರಲ್ಲಿ ಯುಪಿ‌ಐ ಸರಕಾರ ದೇಶದ ರೈತಾಪಿ ವರ್ಗದ ಜನರಿಗೆ ನ್ಯಾಯ ದೊರಕಬೇಕು ಎನ್ನುವ ಕಾರಣಕ್ಕಾಗಿ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಪ್ರಸ್ತುತ ಕೇಂದ್ರದಲ್ಲಿ ಇರುವ ಬಿಜೆಪಿ ನೇತ್ರತ್ವದ ಎನ್‌ಡಿ‌ಎ ಸರಕಾರ ಸುಗ್ರೀವಾಜ್ಞೆಯ ಮೂಲಕ ಈ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದಾಗಿ ರೈತರ ಕೃಷಿ ಭೂಮಿಗಳನ್ನು, ಕೈಗಾರಿಕೆ ಕಾರಿಡಾರ್, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಉದ್ಯಮಗಳು, ಮೂಲಸೌಲಭ್ಯ ಯೋಜನೆ, ರಕ್ಷಣೆ ಹಾಗೂ ವಸತಿ ಯೋಜನೆಗಳಿಗಾಗಿ, ಅಗತ್ಯವಿರುವ ಭೂಮಿಗಳನ್ನು ಅದರ ಮಾಲಿಕರ ಅನುಮತಿ ಪಡೆಯದೆ ವಶಪಡಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದು ಈ ದೇಶದ ಜೀವಾಳವಾಗಿರುವ ರೈತಾಪಿ ವರ್ಗದ ಸ್ವಾತಂತ್ರ್ಯವನ್ನೆ ಹರಣ ಮಾಡಿದಂತಾಗಿದೆ ಎಂದು ಪ್ರತಾಪ್ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಪೋರೇಟ್ ವಲಯಕ್ಕೆ ಅನೂಕೂಲ ಮಾಡಿಕೊಡುವ ಈ ವಿವಾದಾತ್ಮಕ ತಿದ್ದುಪಡಿಯನ್ನು ಕೈ ಬಿಡಲು ಒತ್ತಾಯಿಸಿ ಪಕ್ಷಾತೀತ ನೆಲೆಯಲ್ಲಿ ನಡೆಯುವ ಹೋರಾಟವನ್ನು ಜಿಲ್ಲಾ ರೈತ ಸಂಘ ಬೆಂಬಲಿಸುತ್ತದೆ ಹಾಗೂ ರೈತರ ಊಟದ ತಟ್ಟೆಯನ್ನ ಕಸಿದುಕೊಂಡು ಬಂಡವಾಳಶಾಹಿಗಳ ಕೈಗೆ ಒಪ್ಪಿಸುವ ಸರಕಾರದ ನೀತಿಯನ್ನು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Write A Comment