ಕನ್ನಡ ವಾರ್ತೆಗಳು

‘ಐಕ್ಯತೆಯೆಡೆಗೆ ಸೌಹಾರ್ದ ನಡಿಗೆ’ ಜನಸಮಾವೇಶ ಕಾರ್ಯಕ್ರಮ.

Pinterest LinkedIn Tumblr

dyfi_sfi_protest_1

ಮಂಗಳೂರು,ಫೆ.25 : ಯಾರೂ ಧರ್ಮಗಳ ನಾಶವಾಗಬೇಕೆಂದು ಹೇಳುವುದಿಲ್ಲ. ಆದರೆ ಎಲ್ಲ ಧರ್ಮನುಯಾಯಿಗಳ ಮಧ್ಯೆ ಇರುವ ಅಧರ್ಮ ನಾಶವಾಗಬೇಕು ಎಂದು ನಿಡುಮಾಮಿಡಿ ಸಂಸ್ಥಾನದ ಶ್ರೀ ಚೆನ್ನಮಲ್ಲ ವೀರಭದ್ರ ಸ್ವಾಮೀಜಿ ಹೇಳಿದರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಆಶ್ರಯದಲ್ಲಿ ಮಂಗಳವಾರ ನಡೆದ ‘ಐಕ್ಯತೆಯೆಡೆಗೆ ಸೌಹಾರ್ದ ನಡಿಗೆ’ ಕಾರ್ಯಕ್ರಮದ ಜನಸಮಾವೇಶದಲ್ಲಿ ಮಾತನಾಡಿದರು.

ಎಲ್ಲಿಯವರೆಗೆ ತಮ್ಮ ಮತೀಯರ ಮಧ್ಯೆ ಇರುವ ಅಧರ್ಮಿಗಳನ್ನು ತಮ್ಮವರಲ್ಲ ಎಂದು ಹೇಳುವುದಿಲ್ಲವೋ ಅಲ್ಲಿಯವರೆಗೆ ಕೋಮುವಾದ ನಾಶವಾಗದು. ಹಿಡಿ, ಬಡಿ, ಕಡಿ, ಸುಡಿ ಎಂಬುದು ನಮ್ಮ ಸಂಸ್ಕೃತಿಯಲ್ಲ ಎಂದು ಅವರು ಹೇಳಿದರು.

dyfi_sfi_protest_2 dyfi_sfi_protest_3 dyfi_sfi_protest_4 dyfi_sfi_protest_5 dyfi_sfi_protest_6 dyfi_sfi_protest_7

ಒಂದು ಕಾಲದಲ್ಲಿ ಜಗತ್ತಿಗೆ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ, ಶಾಂತಿಯ ಮಾದರಿ ಹಾಕಿಕೊಟ್ಟಿರುವ ದೇಶ ಭಾರತ. ಈ ಪರಂಪರೆ ಕಟ್ಟಲು ದೇಶದ ಶ್ರಮಣರು, ಋಷಿಗಳು, ದಾರ್ಶನಿಕರು, ಸೂಫಿಗಳು, ಸಂತರು ಕಾರಣರಾಗಿದ್ದಾರೆ. ಹಿಂದುಗಳಿಗೆ, ಮುಸ್ಲಿಮರಿಗೆ, ಕ್ರೈಸ್ತರಿಗೆ ಬೇರೆ ಬೇರೆ ಭಾರತವಿಲ್ಲ. ನಮಗಿರುವುದು ಒಂದೇ ಭಾರತ ಎಂದರು.

ಹಿಂದೂಸಮಾಜೋತ್ಸವ ಸಮಸ್ಯೆಗಳಿಗೆ ಪರಿಹಾರ ಹುಡುಕಲಿ: ಎರಡು ದಶಕಗಳಿಂದ ಹಿಂದು ಸಮಾಜೋತ್ಸವಗಳು ನಡೆಯುತ್ತಿವೆ. ಇವು ಸಂಸ್ಕೃತಿ ಸುಧಾರಣಾ ಉತ್ಸವಗಳಾಗಿ ಹಿಂದು ಸಮಾಜದ ಒಳಗಿನ ಸಮಸ್ಯೆಗಳಾದ ಅಸ್ಪೃಶ್ಯತೆ, ಜಾತಿ ಭೇದ, ಬಡತನ, ಅನಕ್ಷರತೆ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇತರ ಧರ್ಮಗಳೂ ಇಂಥ ಉತ್ಸವ ನಡೆಸಬಹುದು. ಎಲ್ಲ ಧರ್ಮಗಳೂ ಕಣ್ಣೀರು ಒರೆಸುವ ಕೆಲಸ ಮಾಡಲು ಹೇಳಿವೆಯೇ ವಿನಃ, ಕಣ್ಣೀರು ಹರಿಸಲು ಹೇಳಿಲ್ಲ. ಉತ್ಸವಗಳು ಜನರನ್ನು ಬೆಸೆಯಬೇಕೇ ವಿನಃ, ಮನಸ್ಸು ಒಡೆಯಬಾರದು ಎಂದು ವಿನಂತಿಸಿದರು.

ಗೀತೆ ಸುಡಬಾರದು: ಗೀತೆಯು ಒಂದು ಧರ್ಮ ಒಪ್ಪಿಕೊಂಡಿರುವ ಧಾರ್ಮಿಕ ಗ್ರಂಥವೇ ಹೊರತು ರಾಷ್ಟ್ರೀಯ ಗ್ರಂಥವಲ್ಲ. ಗೀತೆ, ಕುರಾನ್ ಅಥವಾ ಬೈಬಲನ್ನು ರಾಷ್ಟ್ರೀಯ ಗ್ರಂಥ ಎಂದು ಹೇಳುವುದು ಸಂವಿಧಾನ ವಿರೋಧಿ ಹಾಗೂ ನಮ್ಮ ಬಹುಸಂಸ್ಕೃತೀಯ ಜೀವನ ವಿಧಾನಕ್ಕೆ ವಿರೋಧವಾದುದು. ಆತ್ಮೋದ್ಧಾರ ಬಯಸುವವರಿಗೆ ಇಂಥ ಧರ್ಮ ಗ್ರಂಥಗಳು ಅಗತ್ಯ. ಭಾರತಕ್ಕೆ ಸಂವಿಧಾನ ಮಾತ್ರ ರಾಷ್ಟ್ರೀಯ ಗ್ರಂಥ ಎಂದ ಸ್ವಾಮೀಜಿ, ಯಾವ ಗ್ರಂಥವನ್ನೂ ಸುಡಬಾರದು. ಗ್ರಂಥಗಳನ್ನು ನಾವು ಜ್ಞಾನಾಗ್ನಿಯಿಂದ ನೋಡಬೇಕು. ಸುಡುವುದರಿಂದ ಒಂದು ಗ್ರಂಥದ ಮಹತ್ವ ಕಡಿಮೆಯಾಗುವುದೂ ಇಲ್ಲ, ಹೆಚ್ಚಾಗುವುದೂ ಇಲ್ಲ ಎಂದು ಇತ್ತೀಚಿನ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಮಾವೇಶಕ್ಕೂ ಮೊದಲು ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಸಮಾನಮನಸ್ಕರ ಮೆರವಣಿಗೆ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಿತು. ಮಧ್ಯಾಹ್ನದ ಉರಿಬಿಸಿಲಿನಲ್ಲೇ ರಸ್ತೆಯಲ್ಲಿ ಕುಳಿತು ಭಾಷಣ ಆಲಿಸಿದರು.

dyfi_sfi_protest_8 dyfi_sfi_protest_10 dyfi_sfi_protest_11

ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್, ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ದೇವದಾಸ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿದರು.  ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಚರಣ್ ಪಂಜಿಮೊಗರು ಸ್ವಾಗತಿಸಿದರು. ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ವಂದಿಸಿದರು. ಕಾರ್ಯದರ್ಸಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಉಚ್ಚಿಲ, ಮಾನವತಾ ವೇದಿಕೆಯ ಯಶವಂತ ಮರೋಳಿ, ಎಐವೈಎಫ್‌ನ ಸೀತಾರಾಂ ಬೇರಿಂಜ, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ.ಶೆಟ್ಟಿ, ಕಿರಣಪ್ರಭಾ, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್, ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್ ಉಪಸ್ಥಿತರಿದ್ದರು.

Write A Comment