ಕನ್ನಡ ವಾರ್ತೆಗಳು

ಪೌರಕಾರ್ಮಿಕರ ಹಕ್ಕುಗಳ ಕಾರ್ಯಾಗಾರ

Pinterest LinkedIn Tumblr

pora_karmika_photo_1

ಮಂಗಳೂರು ಫೆ. 23: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆ, ಮಂಗಳೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಪೌರ ಕಾರ್ಮಿಕರ ಹಕ್ಕುಗಳ ಬಗ್ಗೆ ಕಾನೂನು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಕೆ. ನಾಯಿಕ ನೆರವೇರಿಸಿ ಮಾತನಾಡುತ್ತಾ ಪೌರ ಕಾರ್ಮಿಕರು ಪರಿಸರವನ್ನು ಸ್ವಚ್ಚವಾಗಿ ಇಡುವ ಮುಖಾಂತರ ನಾಗರೀಕರ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತಿದ್ದು, ಇವರ ಹಕ್ಕುಗಳ ಬಗ್ಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಯೊಬ್ಬರ ಹಕ್ಕಿನ ಬಗ್ಗೆ ಭದ್ರತೆ ಒದಗಿಸಿದ್ದು ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಪೌರ ಕಾರ್ಮಿಕರು ಅವುಗಳ ಲಾಭವನ್ನು ಪಡೆದು ಆರೋಗ್ಯ ಕಾಪಾಡುವಲ್ಲಿ ಮುನ್ನೆಚ್ಚರಿಕೆ ವಹಿಸಿ ತಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಗಣೇಶ. ಬಿ. ಮಾತನಾಡುತ್ತಾ ಪೌರ ಕಾರ್ಮಿಕರು ಪರಿಸರದ ವೈದ್ಯರಾಗಿದ್ದು, ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಲು ಶ್ರಮಿಸುತ್ತಾ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಆದುದ್ದರಿಂದ ತಮ್ಮ ಗಳಿಕೆಯಲ್ಲಿ ಸ್ವಲ್ಪ ಹಣವನ್ನು ವ್ಯಯ ಮಾಡುವ ಮುಖಾಂತರ ಆರೋಗ್ಯ ವಿಮೆ ಅಥವಾ ಇ.ಎಸ್.ಐ. ನ ಅನುಕೂಲತೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದ್ದು, ಅದೇ ರೀತಿ ಅವರ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವುದರಿಂದ ಅವರ ಜೀವನವನ್ನು ಸಹಾ ಉತ್ತಮ ಜೀವನವಾಗಿ ಪರಿವರ್ತಿಸಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಡಿ.ಜಿ. ನಾಗೇಶ್ ಪೌರ ಕಾರ್ಮಿಕರ ಹಕ್ಕುಗಳ ಬಗ್ಗೆ ಮತ್ತು ಅವರಿಗೆ ಇರುವ ಸವಲತ್ತುಗಳ ಬಗ್ಗೆ ಹಾಗೂ ವಿಮಾ ಪ್ರಯೋಜನದ ಬಗ್ಗೆ ವಿವರಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ. ಚಂಗಪ್ಪ ಪೌರ ಕಾರ್ಮಿಕರ ಬೇಡಿಕೆಗಳಿಗೆ ಪೂರಕವಾಗಿ ವಕೀಲರ ಸಂಘ ಸಹಕರಿಸುತ್ತದೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರವೂ ಸಹಾ ಸಹಕರಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೌರ ಕಾರ್ಮಿಕರ ಅಹವಾಲುಗಳಿಗೆ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀ ಡಿ.ಜಿ. ನಾಗೇಶ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗೋಕುಲ್‌ದಾಸ್ ನಾಯಕ್ ಉತ್ತರಿಸಿದರು.

Write A Comment