ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವವು ತಾ| 21.02.2015ರಂದು ನಗರದ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಸಂಭ್ರಮ ಮತ್ತು ಸಡಗರದಿಂದ ಜರಗಿತು. ಶ್ರೀ ಕೃಷ್ಣ ಬಲರಾಮರ ವಿಶೇಷ ಮಹಾಪೂಜೆಯ ಬಳಿಕ ಸಾಂಕೇತಿಕವಾಗಿ ರಥಯಾತ್ರೆಗೆ ಚಾಲನೆ ನೀಡಲಾಯಿತು.
ಇಸ್ಕಾನ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷ ಹಾಗೂ ಅಕ್ಷಯ ಪಾತ್ರೆ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀಮಾನ್ ಮಧು ಪಂಡಿತ ದಾಸರು ಸಮಾರಂಭದ ಅಧ್ಯಕ್ಷತೆ ವಹಿಸಿ, ಶ್ರದ್ಧೆ, ಭಕ್ತಿ-ಭಾವ, ಆಚಾರ-ವಿಚಾರಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಕ್ತಾಭಿಮಾನಿಗಳಿಗೆ ಭಗವಂತನ ಕೃಪೆ ಮತ್ತು ಅನುಗ್ರಹ ಸದಾ ಇರಲಿ ಎಂದು ಆಶಯ ವ್ಯಕ್ತಪಡಿಸಿದರು. ಗೌರವ ಅತಿಥಿಗಳಾಗಿ ಖ್ಯಾತ ನ್ಯಾಯಾವಾದಿ ಶ್ರೀ ಎಂ.ಆರ್. ಬಳ್ಳಾಲ್‌ರವರು ಭಾಗವಹಿಸಿದ್ದರು. ದಿಯಾ ಸಿಸ್ಟಮ್ಸ್ ಅಧ್ಯಕ್ಷ ಡಾ| ರವಿಚಂದ್ರ ರಾವ್ ಅಗಾಧ ಮೊತ್ತವನ್ನು ದಾನದ ರೂಪದಲ್ಲಿ ನೀಡುವುದಾಗಿ ಆಶ್ವಾಸನೆ ನೀಡಿದರು. ಶ್ರೀ ರಾಜೀವ್ ಲೋಚನ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರದ ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಶ್ರೀ ಕಾರುಣ್ಯ ಸಾಗರ ದಾಸ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ಶ್ರೀ ಶ್ರೀ ಕೃಷ್ಣ ಬಲರಾಮರ ವಿಗ್ರಹ/ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಮತ್ತು ವಿಧ್ಯುನ್ಮಾನ ಅಲಂಕೃತಗೊಂಡ ಭವ್ಯ ರಥಯಾತ್ರಾ ಮೆರವಣಿಗೆಯನ್ನು ಭಕ್ತಾಭಿಮಾನಿಗಳು, ಅನುಯಾಯಿಗಳು ಶೃದ್ಧಾ-ಭಕ್ತಾಭಿಮಾನದಿಂದ ‘ಹರೇ ಕೃಷ್ಣ ಹರೇ ರಾಮ’ ಜಪದೊಂದಿಗೆ ಭಜನೆ-ಸಂಕೀರ್ತನೆ-ನೃತ್ಯ-ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಎಳೆದು ಸಾಗಿಸಲಾಯಿತು. ಭಕ್ತಾಧಿಗಳು/ಸಾರ್ವಜನಿಕರು ಹರ್ಷೋದ್ದಾರ ಮತ್ತು ಸಂಭ್ರಮದಿಂದ ಈ ಮೆರವಣಿಗೆಯಲ್ಲಿ ಭಾಗವಹಿಸಿ, ಶೋಭಾಯಾತ್ರೆಯುದ್ದಕ್ಕೂ ಫಲ-ಪುಷ್ಪ ಮಂಗಳಾರತಿಯನ್ನು ಶ್ರೀ ಕೃಷ್ಣ ಬಲರಾಮ ಪರಮಾತ್ಮರಿಗೆ ಅರ್ಪಿಸಿದರು.





































