ಕನ್ನಡ ವಾರ್ತೆಗಳು

ಗಂಗೊಳ್ಳಿಯಲ್ಲಿ ಸ್ಟೀಲ್ ಬೋಟ್ ದುರಸ್ತಿಯಿಂದ ರೋಗ ಭೀತಿ; ಗ್ರಾಮಸ್ಥರಿಂದ ಪ್ರತಿಭಟನೆಗೆ ಸಿದ್ಧತೆ

Pinterest LinkedIn Tumblr

ಕುಂದಾಪುರ: ಕಳೆದ ಎರಡು ತಿಂಗಳಿನಿಂದ ಸ್ಟೀಲ್ ಬೋಟ್ ನಿರ್ವಹಣೆ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರಿಂದಾಗಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ಹುಡಿ ಗಾಳಿಯಲ್ಲಿ ಹಾರುವುದರ ಜೊತೆಗೆ ರಾಸಾಯನಿಕ ಬಳಕೆಯಿಂದ ಗ್ರಾಮಸ್ಥರಲ್ಲಿ ರೋಗ ಭೀತಿ ಕಾಡುತ್ತಿದೆ. ಈ ಬಗ್ಗೆ ಸ್ಥಳೀಯರು ಸ್ಟೀಲ್ ಬೋಟ್ ದುರಸ್ಥಿ ಸರಿಯಲ್ಲ ಎಂದು ಖಂಡಿಸಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಘಟನೆಯೂ ನಡೆದಿದೆ.

Gangolli_Steal_Boat Gangolli_Steal_Boat (1) Gangolli_Steal_Boat (2)

ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾಫ್ ಪ್ರದೇಶದಲ್ಲಿ ಇದೀಗ ಕೆಲವರು ಹಣದಾಸೆಗೆ ಬಲಿಯಾಗಿ ಸ್ಟೀಲ್ ಬೋಟ್‌ಗಳನ್ನು ನದಿಯಿಂದ ಮೇಲಕ್ಕೆತ್ತಿ ಅನಧಿಕೃತವಾಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದಾಗಿ ರಾತ್ರಿ ಹಗಲು ಬೋಟ್‌ಗಳನ್ನು ಗ್ರೈಂಡ್ ಮಾಡುವುದರಿಂದ ಸ್ಥಳೀಯರಿಗೆ ಕರ್ಕಶ ಶಬ್ಧದಿಂದ ನಿದ್ದೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ತುಕ್ಕು ಹಿಡಿದ ಕಬ್ಬಿಣದ ಪುಡಿ ಗಾಳಿಯಲ್ಲಿ ಎಲ್ಲೆಡೆ ಹಾರಾಡುತ್ತಿದ್ದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಅಲ್ಲದೇ ಈ ಪ್ರದೇಶವು ಜನವಸತಿ ಪ್ರದೇಶವಾಗಿದ್ದು, ವಯೋವೃದ್ಧರು, ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅನುಮತಿ ಇಲ್ಲ: ಸಾಮಾನ್ಯವಾಗಿ ಸ್ಟೀಲ್ ಬೋಟ್ ನಿರ್ವಹಣೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬಂದರು ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ ಗಂಗೊಳ್ಳಿಯಲ್ಲಿ ನಡೆಯುತ್ತಿರುವ ಸ್ಟೀಲ್ ಬೋಟ್ ನಿರ್ವಹಣೆ ಮಾಡುವಾಗ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ಹಿಂದೆ ಇದೇ ರೀತಿ ಸ್ಟೀಲ್ ಬೋಟ್ ನಿರ್ಮಾಣ, ದುರಸ್ಥಿ ಘಟಕಗಳು ತಲೆ ಎತ್ತಿದ್ದಾಗ ಇದೇ ಕಾರಣಕ್ಕೆ ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟಕಗಳನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಬೋಟ್ ದುರಸ್ತಿ ಕಾರ್ಯ ಸ್ಥಳೀಯರ ನಿದ್ದೆ ಗೆಡಿಸಿದೆ.

ಜಿಲ್ಲಾಧಿಕಾರಿಗೆ ದೂರು: ಸ್ಟೀಲ್ ಬೋಟ್ ದುರಸ್ತಿಗಾಗಿ ಬಳಸುವ ರಾಸಾಯನಿಕ ಅತ್ಯಂತ ದುಷ್ಪರಿಣಾಮ ಬೀರುತ್ತಿದ್ದು, ಇದರಿಂದ ಅಸ್ತಮಾ, ಕಣ್ಣಿನ ತೊಂದರೆಗಳು, ಚರ್ಮ ವ್ಯಾಧಿಗಳು, ಶ್ವಾಸಕೋಶ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು ಸಂಬಂಧಪಟ್ಟವರು ಇನ್ನಾದರೂ ಅಕ್ರಮ ಬೋಟ್ ದುರಸ್ತಿ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Write A Comment