ಕನ್ನಡ ವಾರ್ತೆಗಳು

ಹದಗೆಟ್ಟಿರುವ ರಸ್ತೆ ಮರುಡಾಮರೀಕರಣಕ್ಕೆ ಮೀನ ಮೇಷ; ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

Pinterest LinkedIn Tumblr

ಕುಂದಾಪುರ: ನಿರಂತರವಾಗಿ ಕಲ್ಲು ಸಾಗಾಟ ವಾಹನಗಳ ಸಂಚಾರದಿಂದ ಸಂಪೂರ್ಣವಾಗಿ ಹದಗೆಟ್ಟು ದುರವಸ್ಥೆಗೀಡಾದ ಎಲ್ಲೂರು-ನಾವುಂದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಕೈಗೊಳ್ಳದೇ ಅನಾವಶ್ಯಕವಾಗಿ ವಿಳಂಬಿಸುತ್ತಿರುವುದರ ವಿರುದ್ಧ ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಎಲ್ಲೂರು ಗ್ರಾಮಸ್ಥರು ಹೋರಾಟದ ಸಿದ್ಧತೆ ನಡೆಸಿದ್ದಾರೆ.

Hemmadi_Road_Problem

ಹಲವಾರು ತಿಂಗಳುಗಳಿಂದ ಲಾರಿ, ಟಿಪ್ಪರ್‌ಗಳು ಎಗ್ಗಿಲ್ಲದೇ ಓಡಾಡುತ್ತಿರುವುದರಿಂದ ಎಲ್ಲೂರು-ಜನ್ಮನೆ ಕ್ರಾಸ್ ತನಕ ೩ ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಜಲ್ಲಿ, ಡಾಮರು ಕಿತ್ತುಹೋಗಿದೆ. ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಹೊಂಡ ಗುಂಡಿಗಳು ಉಂಟಾಗಿದ್ದು, ವಾಹನಗಳು ಹಾಗೂ ಜನರ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಎಲ್ಲೂರು ಮೂಲಕ ನಾವುಂದಕ್ಕೆ ಸಂಪರ್ಕ ಕಲ್ಪಿಸುವ ಈ ಗ್ರಾಮೀಣ ರಸ್ತೆಯಲ್ಲಿ ನಿಯಮಿತ ಬಸ್ ಸಂಚಾರವಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ. ನಾನಾ ವಾಹನಗಳ ಸಂಚಾರವಿರುವ ಈ ಜಿಲ್ಲಾ ಮುಖ್ಯ ರಸ್ತೆಮಾರ್ಗ ಹದಗೆಟ್ಟಿದ್ದರಿಂದ ಗ್ರಾಮೀಣ ಪ್ರದೇಶದ ಜನರು ಭಾರೀ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಎಲ್ಲೂರು ಜನ್ಮನೆ ಪರಿಸರದ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಎಲ್ಲೂರು-ನಾವುಂದ ರಸ್ತೆಯಲ್ಲಿ ಅಧಿಕ ಭಾರವನ್ನು ಹೊತ್ತ ಲಾರಿ, ಟಿಪ್ಪರ್‌ಗಳ ಓಡಾಟ ನಿಯಂತ್ರಿಸುವಂತೆ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಗೋಗರೆಯುತ್ತಿದ್ದಾರೆ. ಆದರೆ ಮಾರ್ಗದಲ್ಲಿ ಮನಬಂದಂತೆ ಶಿಲೆಗಲ್ಲುಗಳನ್ನು ಹೇರಿಕೊಂಡು ಸಂಚರಿಸುವ ಲಾರಿ-ಟಿಪ್ಪರ್‌ಗಳ ಭರಾಟೆ ಮಾತ್ರ ಇನ್ನೂ ನಿಂತಿಲ್ಲ. ಹಾಳಾದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲಾಖೆಗಳ ನಿರ್ಲಕ್ಷ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಸಂಬಂಧಪಟ್ಟವರಿಗೆ ನೀಡಿದ್ದಾರೆ.

Write A Comment