ಕನ್ನಡ ವಾರ್ತೆಗಳು

ಜಿಲ್ಲೆಯಲ್ಲಿ 31 ವರ್ಷಗಳಲ್ಲಿ ಮಹತ್ತರ ಬದಲಾವಣೆ : ಉಪೇಂದ್ರ ತ್ರಿಪಾಠಿ

Pinterest LinkedIn Tumblr

Dc_office_pressmeet_1

ಮಂಗಳೂರು, ಫೆ . 21 : ತೆಂಗಿನ ಮರಗಳಿಂದ ಹಸಿರುಮಯವಾಗಿದ್ದ ದ.ಕ. ಜಿಲ್ಲೆಯನ್ನು 31 ವರ್ಷಗಳ ಬಳಿಕ ನೋಡುವಾಗ ಗಗನ ಚುಂಬಿ ಕಟ್ಟಡಗಳೇ ಆವರಿಸಿಕೊಂಡು ಮಹತ್ತರ ಬದಲಾವಣೆಯಾಗಿರುವುದು ಕಂಡು ಬರುತ್ತದೆ ಎಂದು ಕೇಂದ್ರ ಸರಕಾರದ ನೂತನ ಮತ್ತು ನವೀಕರಿಸಬಲ್ಲ ಇಂಧನ ಇಲಾಖೆಯ ಕಾರ್ಯದರ್ಶಿ ಉಪೇಂದ್ರ ತ್ರಿಪಾಠಿ ಅಭಿಪ್ರಾಯಿಸಿದ್ದಾರೆ. 1982-84ರಲ್ಲಿ ದ.ಕ. ಜಿಲ್ಲೆಯ ಪುತ್ತೂರು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ತ್ರಿಪಾಠಿ ಅವರು, ಕಳೆದ 31 ವರ್ಷಗಳಲ್ಲಿ ಜಿಲ್ಲೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಅವಲೋಕನ ನಡೆಸುವ ಸಲುವಾಗಿ ನಿನ್ನೆ ಜಿಲ್ಲೆಗೆ ಆಗಮಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ತಾವು ಕಾರ್ಯ ಆರಂಭಿಸಿದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ತ್ರಿಪಾಠಿ ಅವರು ಅಕಾರಿಯಾಗಿ (ಪುತ್ತೂರು ಸಹಾಯಕ ಆಯುಕ್ತ) ತಾವು ಪ್ರಥಮವಾಗಿ ಕಾರ್ಯ ನಿರ್ವಹಿಸಿದ ದ.ಕ. ಜಿಲ್ಲೆಗೆ ಆಗಮಿಸಿದ್ದಾರೆ. ಸರ್ಕ್ಯೂಟ್ ಹೌಸ್‌ ಹಾಗೂ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಕಾರಿಗಳ ಜೊತೆಗೆ ಅವರು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸುದ್ದಿಗಾರರ ಜೊತೆ ಈ ಅಭಿಪ್ರಾಯ ಹಂಚಿಕೊಂಡರು.

Dc_office_pressmeet_2

ಶಾಂತವಾಗಿದ್ದ ಸರ್ಕ್ಯೂಟ್ ಹೌಸ್ ರಸ್ತೆ, ಕದ್ರಿ ಪಾರ್ಕ್ ಇದೀಗ ಜನನಿಬಿಡ ಪ್ರದೇಶವಾಗಿ ಮಾರ್ಪಟ್ಟಿದೆ. ತೆಂಗಿನಮರಗಳಿದ್ದಲ್ಲಿ ದೊಡ್ಡ ದೊಡ್ಡ ಕಟ್ಟಡಗಳೇ ಕಾಣುತ್ತಿವೆ. ಇಲ್ಲಿ ಆಗಿರುವ ಕೆಲವೊಂದು ಮಹತ್ತರ ಬೆಳವಣಿಗೆಗಳ ಕುರಿತಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದ ಅವರು ಹೇಳಿದರು. ಬೆಚ್ಚಿ ಬೀಳಿಸಿದ್ದ ಮಂಗನಕಾಯಿಲೆ ನಿರ್ಮೂಲನೆ ಸಂತಸದ ವಿಚಾರ ‘‘ನಾನು ಇಲ್ಲಿ ಎಸಿಯಾಗಿದ್ದ ಸಂದರ್ಭ ಬೆಳ್ತಂಗಡಿಯಲ್ಲಿ ಮಂಗನ ಕಾಯಿಲೆಯ ಸಮಸ್ಯೆ ಬಹುತೇಕವಾಗಿ ಕಾಡಿತ್ತು. ಆ ರೋಗದ ನಿರ್ವಹಣೆಗಾಗಿ ಸಾಕಷ್ಟು ಕಷ್ಟ ಪಡಲಾಗಿತ್ತು. ಶಾಲೆ ಹಾಗೂ ಪಂಚಾಯತ್ ಕಟ್ಟಡಗಳನ್ನೂ ಆಸ್ಪತ್ರೆಗಳಾಗಿ ಪರಿರ್ವತಿಸಲಾಗಿತ್ತು.

Dc_office_pressmeet_3

ಆ ಕಾಯಿಲೆ ಪ್ರಸ್ತುತ ಸಂಪೂರ್ಣ ನಿರ್ಮೂಲನವಾಗಿರುವ ಬಗ್ಗೆ ತಿಳಿದು ತುಂಬಾ ಸಂತಸವಾಯಿತು ಎಂದು ಅವರು ಹೇಳಿದರು. ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಅಭಿವೃದ್ಧಿಯಾಗಿದೆ. ನಗ ರದ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗ ಧಾಮ ಅತ್ಯುತ್ತಮ ಪ್ರದೇಶವಾಗಿ ಮಾರ್ಪಟ್ಟಿದೆ. ನಮ್ಮ ಅವಯಲ್ಲಿ ಈ ಯೋಜನೆ ಇಲ್ಲವಾಗಿತ್ತು. 330 ಎಕರೆ ಪ್ರದೇಶದಲ್ಲಿ ಸುಸ್ಥಿರವಾದ ದೊಡ್ಡ ಯೋಜನೆಯೊಂದು ಬಂದಿರುವುದು ಹಾಗೂ ವಾರ್ಷಿಕ ಸುಮಾರು ಆರು ಲಕ್ಷ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿರುವುದು ನಿಜಕ್ಕೂ ಅತ್ಯು ತ್ತಮ ಯೋಜನೆ ಎಂದು ಅವರು ಬಣ್ಣಿಸಿದರು. ಜಿಲ್ಲೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ, ಜಿಲ್ಲೆಯ ಜನಸಂಖ್ಯೆ, ಜೀವನಮಟ್ಟ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಸಾಕ್ಷರತೆ, ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಕಾರಿ ಸದಾಶಿವ ಪ್ರಭು, ವಿವಿಧ ಇಲಾಖೆಗಳ ಅಕಾರಿಗಳು ಉಪಸ್ಥಿತರಿದ್ದರು.

Write A Comment