ಕನ್ನಡ ವಾರ್ತೆಗಳು

ನಾಲ್ಕರ ಬಾಲೆ ಅನ್ನ ಬಾಗಿದ ನೀರಿಗೆ ಬಿದ್ದು ಸಾವು; ತಡವಾಗಿ ಬೆಳಕಿಗೆ ಬಂದ ಪ್ರಕರಣ

Pinterest LinkedIn Tumblr

ಉಡುಪಿ: ಅನ್ನ ಬಾಗಿ ಇಡಲಾದ ನೀರು(ತೆಳಿ)ಗೆ ಬಿದ್ದ ನಾಲ್ಕೂವರೆ ವರ್ಷ ಪ್ರಾಯದ ಮುಗ್ಧ ಬಾಲೆಯೊಬ್ಬಳು ಇಪ್ಪತ್ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿ ಕೊನೆಗೂ ಸಾವನ್ನಪಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Kota_Girl_Death

ಘಟನೆಯ ವಿವರ : ಜನವರಿ 18 ರಂದು ಭಾನುವಾರ ತಾಯಿ ಅಡುಗೆ ಮಾಡುತ್ತಿದ್ದ ವೇಳೆ ಬಕೇಟಿನಲ್ಲಿ ಅನ್ನ ಬಾಗಿದ (ತೆಳಿ)ನೀರಿಟ್ಟಿದ್ದರೆನ್ನಲಾಗಿದೆ. ಅಲ್ಲಿಯೇ ಸಮೀಪದಲ್ಲಿದ್ದ ಮಗು ಆಟವಾಡುತ್ತಾ ಹಿಂದಕ್ಕೆ ಹೋದವಳು ಗೊತ್ತಿಲ್ಲದೆಯೇ ಬಕೇಟಿನೊಳಕ್ಕೆ ಇದ್ದ ಕುದಿಯುತ್ತಿದ್ದ ತೆಳಿಯೊಳಗೆ ಬಿದ್ದ ಪರಿಣಾಮ ಮಗುವಿನ ಸಂಪೂರ್ಣ ದೇಹ ಸುಟ್ಟು ಹೋಗಿತ್ತೆನ್ನಲಾಗಿದೆ. ತಕ್ಷಣ ಕುಂದಾಪುರದ ಚಿನ್ಮಯೀ ಆಸ್ಪತ್ರೆಗೆ ಮಗುವನ್ನು ಕರೆತರಲಾಯಿತಾದರೂ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಇಪ್ಪತ್ತ ಮೂರು ದಿನಗಳ ಬಳಿಕ ಚೇತರಿಕೆ ಕಂಡಿದ್ದ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಸಾವಿಗೆ ಕಾರಣ ನಿಗೂಢ : ಸತತ ಇಪ್ಪತ್ತೆರಡು ದಿನಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದ ಬಾಲೆಗೆ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡು ಬಂದಂತೆ ತೋರಿದ್ದ ಕಾರಣ ವೈದ್ಯರು ಮಗುವನ್ನು ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಇದೇ ಸಂದರ್ಭ ಮಗುವಿಗೆ ರಕ್ತದ ಕೊರತೆ ಕಂಡು ಬಂದಿದ್ದು, ತಕ್ಷಣ ರಕ್ತ ದಾನ ಮಾಡಲಾಯಿತು. ಆದರೆ ನಂತರ ಮಗುವಿಗೆ ತುರಿಕೆ ಆರಂಭವಾಗಿದ್ದು, ಮಗುವಿಗೆ ರಕ್ತ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಮಗು ಸಾವನ್ನಪ್ಪಿದೆಯೇ ಅಥವಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆಯೇ ಎನ್ನುವ ವಿಚಾರ ಮಾತ್ರ ನಿಗೂಢವಾಗಿಯೇ ಉಳಿದಿದೆ. ಮಗುವಿನ ತಾಯಿ ಖಾಸಗೀ ಸಂಸ್ಥೆಯೊಂದರಲ್ಲಿ ಕೆಲವು ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದಾಳೆ.

Write A Comment