ಕಿನ್ನಿಗೋಳಿ .ಫೆ.20 : ಕಿನ್ನಿಗೋಳಿಯಿಂದ ಕಟೀಲನ ಮೂಲಕ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಸರ್ವಿಸ್ ಬಸ್ ಹಾಗೂ ಕಟೀಲು ಕಡೆಯಿಂದ ಕಿನ್ನಿಗೋಳಿಗೆ ಬರುತ್ತಿದ್ದ ಮಿನಿ ಬಸ್ ಮುಖಾಮುಖೀ ಢಿಕ್ಕಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ
ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ಕಿನ್ನಿಗೋಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ನಲ್ಲಿ ಶಾಲಾ ಮಕ್ಕಳ ಸಹಿತ ಸಾಕಷ್ಟು ಪ್ರಯಾಣಿಕರಿದ್ದರು ಎಂದು ಬಸ್‌ನ ನಿರ್ವಾಹಕ ಶಿವರಾಜ್ ತಿಳಿಸಿದ್ದಾರೆ. ತುಮಕೂರು ಶಿರಾದಿಂದ ತಿಮ್ಮಪ್ಪ ಸ್ವಾಮಿ ಸಂಘದವರು ಮಿನಿ ಬಸ್ ಮೂಲಕ ಮಂಗಳವಾರ ರಾತ್ರಿ ರಾಜ್ಯದ ವಿವಿಧ ಧರ್ಮ ಕÒೇತ್ರಗಳಗೆ ಭೇಟಿ ನೀಡಿ ಗುರುವಾರ ಉಡುಪಿ ಮೂಲಕ ಕಟೀಲು ದೇವಳಕ್ಕೆ ಭೇಟಿ ನೀಡಿ ಊಟ ಮುಗಿಸಿ ಹೊರನಾಡು, ಧರ್ಮಸ್ಥಳ ಕ್ಷೇತ್ರಗಳಿಗೆ ಹೊರಟಿದ್ದರು. ಮಿನಿ ಬಸ್‌ನಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು.
ಬಸ್ ಚಾಲಕ ಮುಂಜುನಾಥ, ವಿದ್ಯಾರ್ಥಿ ವಿನೀತಾ ಹಾಗೂ ಮಿನಿ ಬಸ್‌ನಲ್ಲಿದ್ದ ಗಂಗಾಧರ, ರಾಜಣ್ಣ , ದಿವ್ಯಾ, ತಿಮ್ಮಕ್ಕ , ಕಾವೇರಮ್ಮರವರು ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಎಕ್ಕಾರಿನ ನೀಲಾಧರ ಶೆಟ್ಟಿ , ಕಟೀಲಿನ ಇಂದಿರಾ, ಸುಪ್ರಿಯಾ ಬಜಪೆ, ಮಮತಾ ಕಟೀಲು, ಕೋಕಿಲಾ ಕಾವೂರು, ಜ್ಯೋತಿ ಕಾವೂರು, ರೇಣುಕಾ ಕಟೀಲು , ಸೌಮ್ಯಾ ಕಟೀಲು, ಮಿನಿ ಬಸ್‌ನಲ್ಲಿದ್ದ ಹರೀಶ್, ಶಾಂತಮ್ಮ , ಜಂಪಕ್ಕ , ಗಗನ್, ಕರಿಯಮ್ಮ , ಚಿತ್ತಯ್ಯ ತುಮಕೂರು ಗಾಯ ಗೊಂಡಿದ್ದಾರೆ. ಮಿನಿ ಬಸ್ ಹಾಗೂ ಸರ್ವಿಸ್ ಬಸ್‌ಗಳ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಾಯಕಾರಿ ತಿರುವು: ಹೊರ ಜಿಲ್ಲೆಯ ಟೂರಿಸ್ಟ್ ವಾಹನಗಳಿಗೆ ಇಲ್ಲಿನ ತಿರುವುಗಳ ಅರಿವು ತಿಳಿಯದೆ ಇರುವುದರಿಂದ ಇಂತಹ ಘಟನೆ ನಡೆಯಿತ್ತಿದೆ. ನಾನು ಎದುರಿನ ವಾಹನವನ್ನು ನೋಡಿ ತಪ್ಪಿಸಲು ಪ್ರಯತ್ನಿಸಿದೆ ಆ ಹೊತ್ತಿಗೆ ಮಿನಿ ಬಸ್ ಢಿಕ್ಕಿಹೊಡೆದಾಗಿತ್ತು ಎಂದು ಬಸ್ ಚಾಲಕ ಮಂಜುನಾಥ ತಿಳಿಸಿದ್ದಾರೆ.
ಕಟೀಲು ರಿಕ್ಷಾ ಚಾಲಕರು ಕಾರು ಚಾಲಕರು, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಗ್ರಾ. ಪಂ. ಸದಸ್ಯ ಸುನಿಲ್ ಸಿಕ್ವೇರಾ, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ , ಹರೀಶ್ ಶೆಟ್ಟಿ ಮತ್ತಿತರರು ಮಾನವೀಯತೆ ಮೆರೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಹಾಗೂ ಟೂರಿಸ್ಟ್ ವಾಹನದಲ್ಲಿದ್ದವರ ಸರಕು ಸರಂಜಾಮುಗಳನ್ನು ಸಾಗಿಸುವಲ್ಲಿ ನೆರವಾದರು.